ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಡಿ ಹತ್ತಿ ಮಾರಾಟಕ್ಕೆ ರೈತರ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಸೆ.1ರಿಂದ ಹೆಸರು ನೋಂದಣಿ ಆರಂಭವಾಗಿತ್ತು. ಕೊನೇ ದಿನ ಅ.31 ಕಳೆದರೂ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಿರಲಿಲ್ಲ. ಆದ್ದರಿಂದ ಶೇ.80 ರೈತರು ಹೆಸರು ನೋಂದಣಿ ಮಾಡಿರಲಿಲ್ಲ. ಈ ಕುರಿತು ಅ.31ರಂದು ವಿಜಯವಾಣಿ ‘ಎಪಿಎಂಸಿಗೆ ಆಟ ರೈತರಿಗೆ ಸಂಕಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಎಪಿಎಂಸಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಆದ್ದರಿಂದ ನೋಂದಣಿ ಅವಧಿಯನ್ನು ಡಿ.31ರವರೆಗೆ ವಿಸ್ತರಣೆ ಮಾಡಿದ್ದು, ಈಗಾಗಲೇ ನೋಂದಣಿ ಮಾಡಿಸಿದ ರೈತರ ಹತ್ತಿ ಖರೀದಿಗೆ ಕ್ರಮವಹಿಸಲಾಗಿದೆ. ವೈಎಸ್‌ಎಸ್ ಜಿನ್ನಿಂಗ್, ಜೆವಿಆರ್ ಕಾಟನ್ ಮಿಲ್, ಎಂಎಜಿ ಜಿನ್ನಿಂಗ್, ಸಂದೀಪ್ ಕಾಟನ್ ಮಿಲ್‌ನಲ್ಲಿ ಖರೀದಿ ಕೇಂದ್ರ ಆರಂಭಿಸಲು ಮುಂದಾಗಿದೆ.