ನಗರದಲ್ಲಿ ನಾಗರ ಪಂಚಮಿ ಆಚರಣೆ -ಮಹಿಳೆಯರು, ನವದಂಪತಿಗಳಿಂದ ನಾಗಮೂರ್ತಿಗೆ ಹಾಲೆರೆದರು

ರಾಯಚೂರಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರಾವಣ ಮಾಸದ ಪೂಜೆ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ವಿಶೇಷ ಪೂಜೆ, ಅಭಿಷೇಕ ಆಯೋಜಿಸಲಾಗಿತ್ತು.
ರಾಯಚೂರಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರಾವಣ ಮಾಸದ ಪೂಜೆ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ವಿಶೇಷ ಪೂಜೆ, ಅಭಿಷೇಕ ಆಯೋಜಿಸಲಾಗಿತ್ತು.
Published on

ರಾಯಚೂರು

ನಗರದ ಸೇರಿದಂತೆ ಜಿಲ್ಲಾಧ್ಯಂತ ನಾಗರ ಪಂಚಮಿ ಅಂಗವಾಗಿ ಸೋಮವಾರ ಮಹಿಳೆಯರು, ನವ ದಂಪತಿಗಳು ಸೇರಿ ಕುಟುಂಬದವರೆಲ್ಲರೂ ನಾಗರಕಲ್ಲು, ಹುತ್ತಗಳಿಗೆ ಹಾಲೆರೆದು ಸಂಭ್ರಮದಿಂದ ಆಚರಿಸಲಾಯಿತು.

ನಗರದ ಮನೆ ಮಾಡಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಮನೆಗಳಲ್ಲಿ ಮಹಿಳೆಯರು ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ, ಚಪಾತಿ, ಕಡ್ಲೆಕಾಳು ಉಸುಳಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ತಂಬಿಟ್ಟು, ಶೇಂಗಾ, ಕಡ್ಲೆಚಟ್ನಿ ಸೇರಿದಂತೆ ಬಗೆ, ಬಗೆಯ ಊಟಗಳನ್ನು ತಯಾರಿಸಿ ಬಂಧು, ಬಳಗ ನೆರೆ ಹೊರೆಯವರಿಗೆ ಹಂಚಿ ಸಂಭ್ರಮ ಪಡುವುದು ಈ ಹಬ್ಬದ ವಿಶೇಷವಾಗಿತ್ತು.

ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಶ್ರಾವಣ ಮಾಸದ ಪೂಜೆ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ವಿಶೇಷ ಪೂಜೆ, ಅಭಿಷೇಕ ಆಯೋಜಿಸಲಾಗಿತ್ತು. ಇಲ್ಲಿ ಮಹಿಳೆಯ ಪೂರ್ಣ ಕುಂಭ ಆಯೋಜಿಸಲಾಗಿತ್ತು. ಇಲ್ಲಿಗೆ ಆಗಮಿಸಿದ ಮಹಿಳಾ ಭಕ್ತರಿಂದಲೇ ಇಲ್ಲಿನ ನಾಗಮೂರ್ತಿಗೆ ಹಾಲಿನ ಅಭಿಷೇಕ ಮಾಡಿಸಲಾಯಿತು. ಮಧ್ಯಾಹ್ನದ ಪ್ರಸಾದ ವ್ಯವಸ್ಥೆ ಕೂಡ ನಡೆಯಿತು.

ನಗರದ ಈಶ್ವರ ದೇವಸ್ಥಾನ, ಗಂಜ್ ರಸ್ತೆಯಲ್ಲಿನ ಪಾಲಮ್ಮವ್ವ ದೇವಸ್ಥಾನ, ವೆಂಕಟೇಶ್ವರ ದೇವಸ್ಥಾನ ಬಳಿಯ ನಾಗರಕಟ್ಟೆ ಬಳಿ ಕೂಡ ಮಹಿಳೆಯರು ನಾಗ ಪಂಚಮಿ ಆಚರಿಸಿದರು. ನಾಗರಕಟ್ಟೆಗೆ ಎಳ್ಳು ಸೇರಿದಂತೆ ನಾನಾ ಬಗೆಯ ಉಂಡಿಗಳನ್ನಿಟ್ಟು ಹಾಲೆರೆದು ಪೂಜೆ ಸಲ್ಲಿಸಿದರು. ಹೊಸದಾಗಿ ದಾಂಪತ್ಯ ಬದುಕಿಗೆ ಅಡಿಯಿಟ್ಟ ನವ ಜೋಡಿಗಳು ತವರು ಮನೆಗೆ ಬಂದು ಇಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸುವುದು ಕಂಡು ಬಂತು.

ನಾಗರ ಪಂಚಮಿಗೆ ಬಗೆ ಬಗೆಯ ಲಾಡುಗಳದ್ದೆ ದರ್ಬಾರು. ಪುಟಾಣಿ, ಗೋಧಿ, ಬುಂದೆ, ಶೇಂಗಾ, ಹೆಸರು, ಕಡಲೆ, ಎಳ್ಳು, ಉಂಡೆಗಳ ನೈವೇದ್ಯ ಮಾಡಿ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು.

 ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದ ಸಹೋದರಿಯರು ಸಹೋದರರಿಗೆ ನಾಗದೇವನ ಕೃಪಾಶಿರ್ವಾದ ಸದಾ ಇರಲ್ಲೆಂದು ಪ್ರಾರ್ಥಿಸಿ ಕೈಗಳಿಗೆ ಪುಷ್ಪದ ಕಂಕಣವನ್ನು ಕಟ್ಟಿದರು. ಪಂಚಮಿ ಹಬ್ಬದಲ್ಲಿ ಚಿಕ್ಕಮಕ್ಕಳು ಒಣ ಕೊಬ್ಬರಿ ಬಟ್ಟಲುಗಳನ್ನು ಬುಗರಿಯಂತೆ ಆಡಿಸಿ, ಅದು ತುಂಡಾದ ನಂತರ ತಿಂದು ಸಂತೋಷಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net