ದೇವದುರ್ಗ: ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ಹೊಸ ಕಟ್ಟಡಕ್ಕೆ ಕೊನೆಗೂ ಉದ್ಘಾಟನೆ ಭಾಗ್ಯ ಕೂಡಿಬಂದಿದೆ. ಶಾಸಕಿ ಕರೆಮ್ಮ ಜಿ.ನಾಯಕ ಎಸ್ಪಿ ಅರುಣಾಗ್ಷ ಗಿರಿ ಸೇರಿ ಗಣ್ಯರು ಶುಕ್ರವಾರ (ಮೇ 22) ಉದ್ಘಾಟನೆ ಮಾಡಲಿದ್ದಾರೆ.
ಸುಮಾರು 4.98 ಕೋಟಿ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. 2022ರಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರೂ ವರ್ಷದ ನಂತರ 2023ರಲ್ಲಿ ಕೆಲಸ ಆರಂಭವಾಯಿತು. ಕಾಮಗಾರಿ ಪೂರ್ಣಗೊಂಡು ಒಂದು ವರ್ಷದ ನಂತರ ನಾನಾ ಅಡೆತಡೆ ದಾಟಿ ಉದ್ಘಾಟನೆಗೆ ಮಹೂರ್ತ ನಿಗದಿ ಮಾಡಲಾಗಿದೆ.
ಪಿಎಸ್‌ಐ ಕಚೇರಿ, ಸ್ವಾಗತಗಾರರ ಮಿನಿಹಾಲ್, ಮಹಿಳೆಯರ ಕೊಠಡಿ, ಕಂಪ್ಯೂಟರ್ ಸೆಂಟರ್, ಕೈದಿಗಳ ಸೆಲ್, ದಾಖಲೆ ಸಂಗ್ರಹ ಕೊಠಡಿ ಕೆಳಭಾಗದಲ್ಲಿದ್ದರೆ, ಮೇಲ್ಭಾಗದಲ್ಲಿ ಸಭೆ, ಶಾಂತಿಸಭೆ ನಡೆಸಲು ಮಿನಿಹಾಲ್, ಅತಿಥಿಗಳು ಬಂದರೆ ವಿಶ್ರಾಂತಿ ಕೋಣೆ, ಶೌಚಗೃಹ ಸೇರಿ ವಿವಿಧ ಸಣ್ಣಪುಟ್ಟ ಕೊಠಡಿಗಳನ್ನು ನಿರ್ಮಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಹೊಸ ಕಟ್ಟಡ ನಿರ್ಮಾಣಕ್ಕೆ ಹಳೇ ಬಿಲ್ಡಿಂಗ್ ಕೆಡವಲಾಗಿತ್ತು. ಪಕ್ಕದ ಪೊಲೀಸ್ ಕ್ವಾಟರ್ಸ್‌ನಲ್ಲಿ ಠಾಣೆ ನಡೆಸಲಾಗುತ್ತಿತ್ತು. ಜಾಗ ಕಿರಿದಾಗಿದ್ದರಿಂದ ಸಿಬ್ಬಂದಿ, ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಕಟ್ಟಡ ಕಾಮಗಾರಿ ಪೂರ್ಣಗೊಂಡು 8-10ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕೂಡಿಬಂದಿರಲಿಲ್ಲ.
ಆರು ತಿಂಗಳ ಹಿಂದೆ ಕಟ್ಟಡ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗೃಹಸಚಿವ ಡಾ.ಪರಮೇಶ್ವರ ಬಾರದ ಕಾರಣ ಮುಂದೂಡಲಾಗಿತ್ತು. ಸದ್ಯ ಮಳೆಗಾಲ ಬರುತ್ತಿರುವ ಕಾರಣ ಸ್ಥಳೀಯ ನಾಯಕರು, ಅಧಿಕಾರಿಗಳ ನೇತೃತ್ವದಲ್ಲಿ ಕಟ್ಟಡ ಉದ್ಘಾಟನೆ ಮಾಡಲಾಗುತ್ತಿದೆ.