ವಂದಾಲಿಯಲ್ಲಿ ಮಡುಗಟ್ಟಿದ ಶೋಕ

ವಂದಾಲಿ ಗ್ರಾಮದ ಮನೆಯ ಬಳಿ ಸೇರಿರುವ ಸ್ಥಳೀಯರು.
ವಂದಾಲಿ ಗ್ರಾಮದ ಮನೆಯ ಬಳಿ ಸೇರಿರುವ ಸ್ಥಳೀಯರು.
Published on
ಮುದಗಲ್: ಯಮನ ಸ್ವರೂಪಿಯಾಗಿ ಬಂದ ಶಾಲಾ ಬಸ್‌ಗೆ ಬಲಿಯಾದ ಇಬ್ಬರು ಪುಟ್ಟ ಕಂದಮ್ಮಗಳ ಮೃತದೇಹಗಳು ಹುಟ್ಟೂರಿಗೆ ಗುರುವಾರ ತಲುಪುತ್ತಿದ್ದಂತೆ ವಂದಾಲಿ ಗ್ರಾಮವೇ ಸ್ತಬ್ಧವಾಯಿತು. ಬೆರಗುಗಣ್ಣಿನಿಂದ ಪ್ರಪಂಚವನ್ನು ಕಣ್ಣರಳಿಸಿ ನೋಡಬೇಕಿದ್ದ ಭಾನು (4) ಮತ್ತು ವರ್ಷಾ (2) ಮನೆಗೆ ಹೆಣವಾಗಿ ಬಂದಿದ್ದನ್ನು ಕಂಡು ಕಲ್ಲು ಹೃದಯವೂ ಕರಗುವಂತಿತ್ತು. ಗ್ರಾಮಕ್ಕೆ ಗ್ರಾಮವೇ ಕಣ್ಣೀರಲ್ಲಿ ಕೈತೊಳೆಯುತ್ತಾ ಮಕ್ಕಳ ಅಂತ್ಯಸಂಸ್ಕಾರ ನೆರವೇರಿಸಿದ ದೃಶ್ಯ ಪ್ರತಿಯೊಬ್ಬರ ಎದೆಯನ್ನು ಸೀಳುವಂತಿತ್ತು.
ಬೆಂಗಳೂರಿನ ಥಣಿಸಂದ್ರದಲ್ಲಿ ಬುಧವಾರ ನಡೆದ ಭೀಕರ ಅಪಘಾತದ ನೆನಪೇ ಪಾಲಕರನ್ನು ತಬ್ಬಿಬ್ಬುಗೊಳಿಸಿದೆ. ಸಮೀಪದ ವಂದಾಲಿ ಗ್ರಾಮದ ನಾಗನಗೌಡ ಅವರು ಬೆಂಗಳೂರಿನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಾ ಪೊಲೀಸ್ ವಠಾರದಲ್ಲಿ ವಾಸವಾಗಿದ್ದರು. ಬುಧವಾರ ಸಂಜೆ ಹಾಲಿನ ಪ್ಯಾಕೆಟ್ ತರಲೆಂದು ತನ್ನ ಮುದ್ದಿನ ಕಿರಿ ಮಗಳಾದ ವರ್ಷಾ ಮತ್ತು ತನ್ನ ಸಹೋದರನ ದೊಡ್ಡನಗೌಡ ಮಾಲೀಪಾಟಿಲ್ ಅವರ ಕಿರಿ ಮಗಳು ಬಾನು ಇವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಕ್ಷಣಾರ್ಧದಲ್ಲಿ ಬಂದ ಶಾಲಾ ಬಸ್ ಡಿಕ್ಕಿ ಹೊಡೆದಾಗ ಕಣ್ಣೆದುರೇ ಇಬ್ಬರು ಕಂದಮ್ಮಗಳು ರಕ್ತದ ಮಡುವಿನಲ್ಲಿ ಜೀವಬಿಟ್ಟವು. ತಂದೆಯ ಕಣ್ಣೆದುರೇ ಅಪ್ಪಳಿಸಿದ ಜವರಾಯನ ಅಟ್ಟಹಾಸಕ್ಕೆ ಮಕ್ಕಳ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿಹೋಗಿತ್ತು.

ಕಂಬನಿ ಮಿಡಿದ ಸುತ್ತಮುತ್ತಲಿನ ಹಳ್ಳಿಗಳು

ವಂದಾಲಿ ಗ್ರಾಮವಷ್ಟೇ ಅಲ್ಲದೆ, ಸುತ್ತಲಿನ ಗ್ರಾಮಗಳ ಜನರು ಆಗಮಿಸಿ ಕಂದಮ್ಮಗಳ ಅಂತಿಮ ದರ್ಶನ ಪಡೆದರು. ಮುಗ್ದ ಮಕ್ಕಳನ್ನು ಈ ಸ್ಥಿತಿಯಲ್ಲಿ ನೋಡಿದ ಜನರು ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಲೇ ಕಂಬನಿ ಮಿಡಿದರು. ಈ ವೇಳೆ ಗ್ರಾಮಕ್ಕೆ ಲಿಂಗಸುಗೂರು ಬಿಜೆಪಿ ಯುವ ಘಟಕಾಧ್ಯಕ್ಷ ಈಶ್ವರ ವಜ್ಜಲ್ ಹಾಗೂ ಮುದಗಲ್ ಪಿಎಸ್‌ಐ ವೆಂಕಟೇಶ ಮಾಡಗೇರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು.

ಹೆತ್ತವರ ಆಕ್ರಂದನ ಅನಾಥವಾದ ಮನೆ

ಬುಧವಾರ ಸಂಭವಿಸಿದ ಈ ಕರಾಳ ಘಟನೆಯ ಬಳಿಕ ಗುರುವಾರ ಬೆಳಗಿನ ಜಾವ ಕಂದಮ್ಮಗಳ ಮೃತದೇಹಗಳನ್ನು ಹುಟ್ಟೂರಾದ ವಂದಾಲಿ ಗ್ರಾಮಕ್ಕೆ ಕರೆತರಲಾಯಿತು. ಹಾಲಿನ ಪ್ಯಾಕೆಟ್ ತರಲು ಹೋದ ಮಕ್ಕಳು ಮತ್ತೆ ಬರುವುದಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ವರ್ಷಾ ಮತ್ತು ಬಾನು ಅವರ ತಾಯಂದಿರ ರೋದನ ನೋಡುಗರನ್ನು ಮರುಗುವಂತೆ ಮಾಡಿತ್ತು. ಹಬ್ಬದಂತಿರಬೇಕಿದ್ದ ಮನೆಯಲ್ಲಿ ಇಂದು ಸ್ಮಶಾನ ಮೌನ ಆವರಿಸಿದ್ದು, ಕುಟುಂಬಸ್ಥರ ಗೋಳಾಟಕ್ಕೆ ಸಾಂತ್ವನ ಹೇಳುವವರೂ ಸಹ ಕಣ್ಣೀರು ಸುರಿಸುತ್ತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net