ಸಿಂಧನೂರಿನ ತಾಯಿ-ಮಕ್ಕಳ ಆಸ್ಪತ್ರೆಗೆ ದಾಖಲಾದ ಅಂಬೇಡ್ಕರ್ ವಸತಿ ನಿಲಯದ ಮಕ್ಕಳ ಆರೋಗ್ಯವನ್ನು ಶಾಸಕ ಹಂಪನಗೌಡ ಬಾರ್ದಲಿ ವಿಚಾರಿಸಿದರು. ತಾಪಂ ಇಒ ಚಂದ್ರಶೇಖರ, ಡಿವೈಎಸ್‌ಪಿ ಚಂದ್ರಶೇಖರ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಅನಿಲಕುಮಾರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಶಫ್ಪುಖಾನ್ ಇದ್ದರು.
ಸಿಂಧನೂರು: ನಗರದ ವಸತಿ ನಿಲಯಗಳಲ್ಲಿ ಆಹಾರ ವ್ಯತ್ಯಾಸದಿಂದ ಮಕ್ಕಳು ಅಸ್ವಸ್ಥಗೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಶಾಸಕ ಹಂಪನಗೌಡ ಬಾರ್ದಲಿ, ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಗ್ರಹಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
ನಗರದ ತಾಯಿ-ಮಕ್ಕಳ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ತಿಂಗಳು ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಆಹಾರ ವ್ಯತ್ಯಾಸವಾಗಿ ಮಕ್ಕಳು ಅಸ್ವಸ್ಥಗೊಂಡಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತೆ, ಕುಡಿಯುವ ನೀರು ಹಾಗೂ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಘಟನೆಗೆ ಕಾರಣರಾದವರನ್ನು ಅಮಾನತುಗೊಳಿಸಲಾಗಿತ್ತು.
ಜತೆಗೆ ತಾಲೂಕು ಮಟ್ಟದ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಆದರೂ ಈಗ ಸ್ಥಳೀಯ ಅಂಬೇಡ್ಕರ್ ವಸತಿ ನಿಲಯದಲ್ಲಿ ಮೂರು ಬಾರಿ ಮಕ್ಕಳು ಅಸ್ವಸ್ಥಗೊಳ್ಳುವ ಪ್ರಕರಣಗಳು ಸಂಭವಿಸಿವೆ. ಇದಕ್ಕೆ ಯಾರು ಹೊಣೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು.
ಹಿಂದಿನ ಪ್ರಕರಣಗಳ ಸಂದರ್ಭದಲ್ಲಿ ವಿಷಪೂರಿತ ಆಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿತ್ತು. ಮಾಧ್ಯಮಗಳು ಇರುವ ಸತ್ಯವನ್ನೇ ಜನರಿಗೆ ತಲುಪಿಸಬೇಕು. ತಪ್ಪಾಗಿ ಗ್ರಹಿಸಿ ಬರೆದರೆ ಮಕ್ಕಳ ಪಾಲಕರು ವಸತಿ ನಿಲಯಗಳ ಬಗ್ಗೆ ಕೆಟ್ಟದಾಗಿ ಭಾವಿಸಿಕೊಳ್ಳುತ್ತಾರೆ. ತಾಲೂಕಿನ ಎಲ್ಲ ವಸತಿ ನಿಲಯಗಳಿಗೆ ಈಗಾಗಲೇ ಸ್ವಂತ ಕಟ್ಟಡ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.