ರಾಯಚೂರಿನ ಜಿಲ್ಲಾಧಿಕಾರಿಗಳ ಭವನದ ವಿಡಿಯೋ ಕಾನ್ಪಾರೇಷನ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಸ್.ಪೂವಿತಾ ಅಧ್ಯಕ್ಷತೆಯಲ್ಲಿ ಜಿಲ್ಲಾ ತೈಲ ಕಂಪನಿಯ ಸೇಲ್ಸ್ ಅಧಿಕಾರಿಗಳು ಹಾಗೂ ಪೆಟ್ರೋಲ್, ಡೀಸೆಲ್ ಬಂಕ್ ಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್,ಬಸವಣ್ಣೇಪ್ಪ ಕಲಶೆಟ್ಟಿ, ತಹಶಿಲ್ದಾರ್ ಸುರೇಶ್ ವರ್ಮಾ, ಆಹಾರ ಇಲಾಖೆಯ ವ್ಯವಸ್ಥಾಪಕ ಹರೀಶ್, ಆಹಾರ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹ್ಮದ್ ಇದ್ದರು.
ಜಿಲ್ಲೆಯಲ್ಲಿ ತೈಲ ಕೊರತೆ ಇಲ್ಲ, ಸಾರ್ವಜನಿಕರು ಅಂತಕ ಪಡಬಾರದು -ಡಿಸಿ
ರಾಯಚೂರು ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್.ಪಿ.ಜಿ ಅನಿಲ್ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಹಾಗಾಗಿ ಸಾರ್ವಜನಿಕರು ಅಂತಕ ಪಡಬಾರದೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಭವನದ ವಿಡಿಯೋ ಕಾನ್ಪಾರೇಷನ್ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಅಧಿಕಾರಿಗಳು, ತೈಲ ಕಂಪನಿಯ ಸೇಲ್ಸ್ ಅಧಿಕಾರಿಗಳು ಹಾಗೂ ಪೆಟ್ರೋಲ್, ಡೀಸೆಲ್ ಬಂಕ್ ಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತೈಲ ಪೂರೈಕೆ ವಿಷಯದಲ್ಲಿ ಕಂಪನಿಗಳು ಜಾಗರೂಕತೆ ವಹಿಸಿ, ಸಮಸ್ಯೆ ಬಾರದ ರೀತಿಯಲ್ಲಿ ಇಂಧನ ಪೂರೈಸಬೇಕು.
ಜಿಲ್ಲೆಗೆ ವಿವಿಧ ತೈಲ ಕಂಪನಿ ವಿತರಕರು ಸಮರ್ಪಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸಬೇಕು. ಎಲ್ಲ ಬಂಕ್ ಮಾಲೀಕರು ದೈನಂದಿನ ಮಾಹಿತಿ ಒದಗಿಸಬೇಕು. ಸಾರ್ವಜನಿಕರ ಬೇಡಿಕೆ ಅನುಸಾರ ಇಂಧನ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು.
ಮುಂಗಾರು ಆರಂಭವಾಗುತ್ತಿರುವರಿಅದ ರೈತರ ಭೂಮಿ ಉಳುಮೆ ಕಾರ್ಯ ನಡೆಯುತ್ತಿದೆ. ಹಾಗಾಗಿ ರೈತರಿಗೆ ಯಾವುದೇ ಅನಾನುಕೂಲ ಹಾಗೂ ಸಮಸ್ಯೆಯಾಗದಂತೆ ಇಂಧನ ಪೂರೈಕೆ ಮಾಡಬೇಕು. ನಿಗದಿತ ದರದಲ್ಲಿ ತೈಲವನ್ನು ಮಾರಾಟ ಮಾಡಬೇಕು. ಒಂದು ವೇಳೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆಹಾರ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹ್ಮದ್ ಮಾತನಾಡಿ, ಜಿಲ್ಲೆಯಲ್ಲಿ ಬಿಪಿಸಿಎಲ್ 48, ಐಒಸಿಎಲ್ 84 ಎಚ್‌ಪಿಸಿಎಲ್ 30 ಇದ್ದು, ನಯಾರ 32 ಒಳಗೊಂಡಂತೆ ಒಟ್ಟು 194 ಪೆಟ್ರೋಲ್ ಬಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ನಂತರ ಗ್ರಾಹಕರ ಹಿತರಕ್ಷಣೆ, ಇಂಧನ ಸುರಕ್ಷತೆ ಮತ್ತು ನಿಯಮಾವಳಿಗಳ ಪಾಲನೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜಿಲ್ಲೆಯಲ್ಲಿ ಇಂಧನದ ಕೊರತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸುವುದರ ಜೊತೆಗೆ ಇಂಡೆಂಟ್ ಅನುಗುಣವಾಗಿ ಇಂಧನ ಪೂರೈಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್,ಬಸವಣ್ಣೇಪ್ಪ ಕಲಶೆಟ್ಟಿ, ತಹಶಿಲ್ದಾರ್ ಸುರೇಶ್ ವರ್ಮಾ, ಆಹಾರ ಇಲಾಖೆಯ ವ್ಯವಸ್ಥಾಪಕ ಹರೀಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು, ವಿವಿಧ ತೈಲ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.