

ಪ್ರಮುಖ ಮುಖ್ಯಾಂಶಗಳು
ರಾಯಚೂರು ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಕಾರಾತ್ಮಕವಾಗಿ ಸಹಕರಿಸುವ ಮೂಲಕ ನಿಖರ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಶುಕ್ರವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂದ ಮತದಾರರ ಗಣತಿ ನಮೂನೆಗಳ ವಿತರಿಸಿರುವ ಕುರಿತು ಮಾಹಿತಿ ನೀಡಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಗಣತಿ ನಮೂನೆಗಳ ವಿತರಣೆಯ ಕಾರ್ಯವು ಪ್ರಗತಿಯಲ್ಲಿದ್ದು, ಈಗಾಗಲೇ ಜು.10ರ ಮಧ್ಯಾಹ್ನ 12ರ ವೇಳೆಗೆ ಶೇ.98.45ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಉಳಿದಿರುವ ಶೇ.1.55ರಷ್ಟು ಪ್ರಕರಣಗಳಲ್ಲಿ ಮರಣ ಹೊಂದಿದವರು, ಸ್ಥಳಾಂತರಗೊಂಡವರು ಹಾಗೂ ಮನೆಗೆ ಬೀಗ ಹಾಕಿ ಬೇರೆಡೆ ವಾಸಿಸುತ್ತಿರುವವರ ವಿವರಗಳಿದ್ದು, ಇವುಗಳನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಜುಲೈ 10ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ 17,14,559 ಮತದಾರರ ಪೈಕಿ ಈಗಾಗಲೇ 16,88,008 ಮತದಾರರರನ್ನು (ಶೇ.98.45) ಮ್ಯಾಪಿಂಗ್ ಮಾಡಲಾಗಿದೆ. ಬಾಕಿ ಉಳಿದ ಮತದಾರರ ವಿಳಾಸ ಪತ್ತೆಯಾಗುತ್ತಿಲ್ಲ. ಇವರು ಯಾರು ಮತ್ತು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಪಟ್ಟಿಯಿಂದ ತೆಗೆದುಹಾಕಲು ಅಥವಾ ಸರಿಪಡಿಸಲು ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬೂತ್ ಮಟ್ಟದ ಏಜೆಂಟರುಗಳು ನಮಗೆ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕಿದೆ. ಮರಣ ಹೊಂದಿದವರ ಡೆತ್ ಸರ್ಟಿಫಿಕೇಟ್ ಲಭ್ಯವಿದ್ದರೆ ಅಂಥವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಸುಲಭವಾಗುತ್ತದೆ ಎಂದು ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರನ್ನು ಗುರುತಿಸುವಲ್ಲಿ ಸ್ಥಳೀಯ ವಾರ್ಡ್ ಸದಸ್ಯರು, ಮಾಜಿ ಕೌನ್ಸಿಲರ್‌ಗಳು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರ ಪಾತ್ರ ದೊಡ್ಡದಾಗಿದೆ. ಪಕ್ಷಾತೀತವಾಗಿ ಇವರೆಲ್ಲರಿಗೂ ಸ್ಥಳೀಯ ಮತದಾರರ ಬಗ್ಗೆ ನಿಖರವಾದ ಮಾಹಿತಿ ಇರುತ್ತದೆ. ಆದ್ದರಿಂದ ತಕ್ಷಣವೇ ತಹಶೀಲ್ದಾರರು, ಇಒ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ಕರೆದು, ಮಹಜರು ಪ್ರಕ್ರಿಯೆಯ ಮೂಲಕ ನಿಖರ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕ ಹಾಗೂ ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಲು ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗಣತಿ ನಮೂನೆಗಳನ್ನು ಭರ್ತಿ ಮಾಡುವಾಗ ಸಾರ್ವಜನಿಕರಲ್ಲಿ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಫಾರ್ಮ್ಗಳಲ್ಲಿನ ಮೊದಲ ಭಾಗ ಹಾಗೂ ಎರಡನೇ ಭಾಗಗಳನ್ನು ಭರ್ತಿ ಮಾಡುವಾಗ ಆಗುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಬಿಎಲ್‌ಒ ಮತ್ತು ಬಿಎಲ್‌ಎಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದ ಅವರು, ಎಸ್‌ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮಹೋಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆಯ ಶಿರಸ್ತೇದಾರ ಋಷಿಕೇಶಿ ಸೇರಿ ಅನೇಕರು ಇದ್ದರು.