ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ  ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ್,ಹಂಪಯ್ಯ ಸಾಹುಕಾರ, ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಇದ್ದರು.
ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ್,ಹಂಪಯ್ಯ ಸಾಹುಕಾರ, ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದಂತೆ ನೋಡಿಕೊಳ್ಳಿ
  • ಹಳೆ ಬಿಲ್ ಪಾವತಿ ಮಾಡದ ಅಧಿಕಾರಿಗಳಿಗೆ ನೋಟಿಸ್
  • ಅಧಿಕಾರಿಗಳಿಂದ ಶಾಸಕರಿಗೆ ವ್ಯಂಗ್ಯ

ರಾಯಚೂರು

ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿ ಮಾಡಿ ಗ್ರಾಮಗಳಲ್ಲಿರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರಿಯಾಗಿನ ಕಾರ್ಯ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮವಾಗಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಎಚ್ಚರಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 17.26 ಟಿಎಂಸಿ ನೀರು ಸಂಗ್ರಹವಿದ್ದು, ಜತೆಗೆ 200 ಕ್ಯೂಸೆಕ್ ನೀರು ಒಳ ಹರಿವು ಇದ್ದು, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲೂಕಿನ ಗ್ರಾಮಗಳಿಗೆ ಸಮರ್ಪಕ ನೀರು ಒದಗಿಸಬಹುದಾಗಿದೆ. ಜಲಾಶಯದಲ್ಲಿ ನೀರಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ತುಂಗಭದ್ರಾ ಎಡದಂಡೆ ಕಾಲುವೆಯ ಯರಮರಸ್, ಸಿರವಾರ, ಸಿಂಧನೂರು ಹಾಗೂ ವಡ್ಡರಹಟ್ಟಿ ವಿಭಾಗಗಳಿಗೆ ನೀರನ್ನು ಒದಗಿಸುವ ದಿನಾಂಕಗಳನ್ನು ವಿಸ್ತರಣೆ ಮಾಡಿ, ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯ ಕೆರೆಗಳನ್ನು ತುಂಬಿಸಬೇಕು ಎಂದರು.

ಕಳೆದ ಬಾರಿ ನೀರಿನ ಸಮಸ್ಯೆಯನ್ನು ನೀಗಿಸಲು ಬಾಡಿಗೆಗೆ ಪಡೆದಿದ್ದ ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳ ಬಾಡಿಗೆ ಪಾವತಿಸದಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಬಾಕಿ ಉಳಿದಿರುವ ಬಾಡಿಗೆ ಮೊತ್ತವನ್ನು ಆಯಾ ಬೋರ್‌ವೆಲ್ ಮತ್ತು ಟ್ಯಾಂಕರ್ ನೀಡಿದವರಿಗೆ ಪಾವತಿ ಮಾಡಬೇಕು. ಈ ಬಾರಿ ಜಿಲ್ಲೆಯಲ್ಲಿ 35 ಗ್ರಾಮ ಪಂಚಾಯತ್‌ಗಳ 53 ಗ್ರಾಮಗಳಲ್ಲಿ 62 ಬ್ವೋೆಲ್ ಗಳನ್ನು ಬಾಡಿಗೆ ಪಡೆಯಲಾಗಿದ್ದು, ಅಗತ್ಯವಿದ್ದರೆ, ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ 782 ಆರ್‌ಒ ಪ್ಲಾಂಟ್‌ಗಳಲ್ಲಿ 589 ಘಟಕಗಳು ಚಾಲ್ತಿಯಲ್ಲಿವೆ ಉಳಿದ ಪ್ಲಾಂಟ್‌ಗಳನ್ನು ಶೀಘ್ರವೇ ಆರಂಭಿಸಬೇಕು. ಪ್ರತಿಯೊಂದು ಪ್ಲಾಂಟ್‌ಗಳ ರಿಪೇರಿಗಾಗಿ 50 ಸಾವಿರ ರೂ.ದಂತೆ ವೆಚ್ಚ ಮಾಡಲು ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು, ಅಗತ್ಯವಿದ್ದರೆ ಆಯಾ ಗ್ರಾಮ ಪಂಚಾಯತಿಯಿಂದ ವೆಚ್ಚ ಮಾಡಿ ಗ್ರಾಮಗಳಲ್ಲಿ ನೀರು ಶುದ್ದೀಕರಣ ಘಟಕಗಳನ್ನು ಆರಂಭಿಸಬೇಕು ಎಂದರು.

ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ರಾಯಚೂರು ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಮೂಲದಿಂದ ಮಾತ್ರ ಕುಡಿಯುವ ನೀರನ್ನು ಪಡೆಯಬಹುದಾಗಿದ್ದು, ಕಳೆದ ಬಾರಿ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 14 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳನ್ನು ಬಾಡಿಗೆ ಪಡೆಯಲಾಗಿತ್ತು. ಅದಕ್ಕಾಗಿ 50 ಲಕ್ಷ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಈವರೆಗೆ ಕೇವಲ 6-7 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ ಬಾಡಿಗೆ ಮೊತ್ತವನ್ನು ನೀಡಿಲ್ಲ ನಾವೇಗೆ ಬದುಕಬೇಕು. ಹಳ್ಳಿಗಳಿಗೆ ಹೇಗೆ ಮುಖ ಹೊತ್ತು ಹೋಗಬೇಕು. ಮೊದಲ ಆಧ್ಯತೆಯಾಗಿ ಟ್ಯಾಂಕರ್ ಮತ್ತು ಬೋರ್‌ವೆಲ್ ಬಾಡಿಗೆ ಪಡೆದವರಿಗೆ ಬಾಡಿಗೆ ಹಣವನ್ನು ಪಾವತಿ ಮಾಡಬೇಕು ಎಂದರು.

ನಗರಕ್ಕೆ ಎರಡು ಜಲಶುದ್ದೀಕರಣ ಘಟಕಗಳಿದ್ದು, ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ರಾಂಪೂರು ಘಟಕ ಹಾಗೂ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಚಿಕ್ಕಸುಗೂರು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಆದರೆ ಅಲ್ಲಿ ಜಾಕ್‌ವೆಲ್ ಸಮಸ್ಯೆಯಿದ್ದು, 30 ವರ್ಷಗಳ ಹಳೆಯ ಜಾಕ್ವೆಲ್‌ಗಳಾಗಿದ್ದು, ಅವುಗಳನ್ನು ಬದಲಿಸಬೇಕಿದೆ. ಜಾಕ್‌ವೆಲ್, ಪಂಪ್, ಸ್ಟಾರ್ಟರ್ ಸಮಸ್ಯೆಯಿದ್ದು, ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಶಾಸಕ ದದ್ದಲ್ ಬಸನಗೌಡ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯ ಕುರಿತು ಮಾಹಿತಿ ನೀಡಲು ಸಾರ್ವಜನಿಕರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ ಆದರೆ ಸರಿಯಾಗಿ ಸ್ಪಂಧನೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಸಾರ್ವಜನಿಕರು ಕುಡಿಯುವ ನೀರಿನ ಕುರಿತು ಮಾಹಿತಿ ನಿಡಿದಾಗ ಅದಕ್ಕೆ ಸಂಬಂಧಪಟ್ಟ ನೋಡೆಲ್ ಅಧಿಕಾರಿಗಳು ಮತ್ತು ಸಹಾಯವಾಣಿ ಸಿಬ್ಬಂದಿ ಸ್ಪಂಧಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕ ಹಂಪಯ್ಯ ನಾಯಕ, ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಬಾಕ್ಸ್
ಕಳೆದ ವರ್ಷ ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಸೊರಬರಾಜು ಮಾಡಿದ ಟ್ಯಾಂಕರ್‌ಗಳಿಗೆ ಒಂದು ವರ್ಷವಾದರು ಪೂರ್ಣಗೊಳಿಸದಿರುವುದರಿಂದ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಸಂಬಂಧಿಸಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಕೂಡಲೇ ಬಿಲ್ ಪಾವತಿ ಮಾಡಲು ಆದೇಶ ನೀಡಿದರು.
ಅದರಂತೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ನಾರಯಣಪುರ ಜಲಾಶಯದ ಅಧಿಕಾರಿಗಳ ಜತೆಗೆ ಜಲಧಾರೆ ಯೋಜನೆ ಕುರಿತು ಮಾತನಾಡುವಾಗ ಅಧಿಕಾರಿ ಶ್ರೀಧರ ಅವರಿಗೆ ‘‘ಕನ್ನಡ ಬರಲ್ವ ಎಂದು ಪ್ರಶ್ನಿಸಿದರು’’ ಆದರೆ ಅಧಿಕಾರಿ ಕನ್ನಡದಲ್ಲಿಯೇ ನನಗೆ ಕನ್ನಡ ಬರಲ್ಲವೆಂದು ವ್ಯಂಗ್ಯವಾಗಿ ಮಾತನಾಡಿರುವುದು ಶಾಸಕರಿಗೆ ಮುಜುಗರ ತರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net