ಕವಿತಾಳ: ಗುಗೆಬಾಳ ಹತ್ತಿರ ತುಂಗಭದ್ರಾ ಎಡದಂಡೆ ಮುಖ್ಯನಾಲೆಯ ಚೈನ್ ಸಂಖ್ಯೆ 4488 ರಲ್ಲಿ ಬೊಂಗಾ ದುರಸ್ತಿ ಕಾರ್ಯ ಸಮರ್ಪಕವಾಗಿ ಮಾಡುವಂತೆ ಅಧಿಕಾರಿಗಳಿಗೆ ಎಂಎಲ್ಸಿ ಎನ್.ಬೋಸರಾಜು ಸೂಚಿಸಿದರು.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಬೊಂಗಾಕ್ಕೆ ತಾತ್ಕಾಲಿಕವಾಗಿ ಕೆಂಪು ಮಣ್ಣು ಹಾಕಿ ಮುಚ್ಚಿರುವುದನ್ನು ಗಮನಿಸಿದ ಬೋಸರಾಜು, ನಾಲೆಗೆ ನೀರು ಬಿಟ್ಟರೆ ಮತ್ತೆ ಬೊಂಗಾ ಬೀಳುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಮಣ್ಣು ತೆರವುಗೊಳಿಸಿ ನಾಲೆಗೆ ನೀರು ಬರುವುದರೊಳಗೆ ಕೆಲಸ ಮುಗಿಸಬೇಕು ಎಂದು ನೀರಾವರಿ ಇಲಾಖೆ ಎಇಇ ವಿದ್ಯಾಸಾಗರಗೆ ತಾಕೀತು ಮಾಡಿದರು.
71ನೇ ಉಪನಾಲೆಗೆ ನೀರುಬಿಡುವ ಗೇಟ್ ಮುರಿದಿರುವುದನ್ನು ನೋಡಿ, ಗುಣಮಟ್ಟದ ಗೇಟ್ ಅಳವಡಿಸಬೇಕು. 11ರಂದು ನೀರಾವರಿ ಸಲಹಾ ಸಮಿತಿ ಸಭೆ ಇದ್ದು, ನಾಲೆಗೆ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮಾನ್ವಿ ಶಾಸಕ ಹಂಪಯ್ಯನಾಯಕ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಪ್ರಮುಖರಾದ ಮಾಳಪ್ಪ, ಶರಣಪ್ಪ ಗುಡದೂರು, ತಿಪ್ಪಯ್ಯಸ್ವಾಮಿ ಇತರರಿದ್ದರು.