ಹಸ್ತಪ್ರತಿಗಳು ಜ್ಞಾನ ಪರಂಪರೆಯ ಸಂಪತ್ತು

ಹಸ್ತಪ್ರತಿ
ಹಸ್ತಪ್ರತಿ
Published on

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ
  • ಸಾಮಾಜಿಕ
  • ವಿಚಾರ
ಸಿಂಧನೂರು: ಹಿಂದಿನ ಕಾಲದಲ್ಲಿ ಜ್ಞಾನ ಮತ್ತು ಸಾಹಿತ್ಯವನ್ನು ಕಾಗದ, ತಾಳೆಗರಿ, ಭೂರ್ಜಪತ್ರ ಮುಂತಾದವುಗಳ ಮೇಲೆ ಕೈಯಿಂದ ಬರೆಯಲಾಗುತ್ತಿತ್ತು. ಇಂಥ ಬರಹಗಳನ್ನು ಹಸ್ತಪ್ರತಿಗಳು ಎಂದು ಕರೆಯಲಾಗುತ್ತದೆ.
ಇವುಗಳಲ್ಲಿ ಕಾವ್ಯ, ವಚನ, ಪುರಾಣ, ವೈದ್ಯಕೀಯ ಜ್ಞಾ ನ, ಜ್ಯೋತಿಷ್ಯ, ಇತಿಹಾಸ, ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳಂತಹ ಅನೇಕ ವಿಷಯಗಳು ದಾಖಲಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಹೇಳಿದರು.
ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ದತ್ತಿನಿಧಿ ಪ್ರಯುಕ್ತ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಸ್ತಪ್ರತಿಗಳು ಕೇವಲ ಹಳೆಯ ಬರಹಗಳಲ್ಲ. ಅವು ನಮ್ಮ ಸಾಂಸ್ಕೃತಿಕ ಸ್ಮೃತಿ ಮತ್ತು ಜ್ಞಾನ ಪರಂಪರೆಯ ಸಂಪತ್ತು. ಅವುಗಳ ಮೂಲಕ ನಮ್ಮ ಪೂರ್ವಜರ ಜೀವನಶೈಲಿ, ಚಿಂತನೆ, ಭಾಷೆ, ಸಾಹಿತ್ಯ ಮತ್ತು ವೈಜ್ಞಾನಿಕ ಜ್ಞಾನವನ್ನು ತಿಳಿದುಕೊಳ್ಳಬಹುದು. ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಕೇವಲ ಒಬ್ಬ ವ್ಯಕ್ತಿಯ ಅಥವಾ ಒಂದು ಸಂಸ್ಥೆಯ ಜವಾಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಹಸ್ತಪ್ರತಿಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಡಿಜಿಟಲೀಕರಣಗೊಳಿಸಿ, ಸಂಶೋಧನೆಗೆ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಬೇಕು ಎಂದು ತಿಳಿಸಿದರು.
ಅರ್ಥಶಾಸ ವಿಭಾಗದ ಮುಖ್ಯಸ್ಥ ಡಾ.ವೆಂಕಟರಮಣ ಮಾತನಾಡಿ, ಹಸ್ತಪ್ರತಿಗಳನ್ನು ಉಳಿಸುವುದು ಎಂದರೆ ನಮ್ಮ ಇತಿಹಾಸ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದಾಗಿದೆ. ಅನೇಕ ಸಾಹಿತಿಗಳು ಎಲೆಮರಿಕಾಯಿಯಂತೆ ಶ್ರಮಿಸಿದ್ದಾರೆ ಎಂದರು.
ನಿವೃತ್ತ ಉಪನ್ಯಾಸಕಿ ಮಧುಮತಿ ದೇಶಪಾಂಡೆ, ಪ್ರಾಚಾರ್ಯರಾದ ಡಾ.ಕೆ.ಖಾದರ ಭಾಷಾ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಹೀರುದ್ದೀನ್ ಸಾಬ್, ಯಂಕಪ್ಪ ಡಣಾಪುರ, ಬಾಲಾಜಿ, ರಾಜಪ್ಪ, ಶಂಕರಲಿಂಗ, ಬಸವರಾಜ ಸಜ್ಜನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net