ಸರ್ಕಾರಿ ಕಚೇರಿಗಳ ಜಾಲಾಡಿದ ಲೋಕಾ ತಂಡ

ಲಿಂಗಸುಗೂರು ಪುರಸಭೆಗೆ ಶುಕ್ರವಾರ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ಎ.ವಿ. ಪಾಟೀಲ್ ಭೇಟಿ ನೀಡಿ ಮಾಹಿತಿ ಪಡೆದರು. ಡಿಎಸ್ಪಿ ಸಚಿನ್ ಚೆಲುವಾದಿ, ಇನ್ಸ್‌ಪೆಕ್ಟರ್ ಆನಂದ, ರಾಯಚೂರು ಲೋಕಾಯುಕ್ತ ಎಸ್ಪಿ ಸತೀಶ ಇದ್ದರು.
ಲಿಂಗಸುಗೂರು ಪುರಸಭೆಗೆ ಶುಕ್ರವಾರ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ಎ.ವಿ. ಪಾಟೀಲ್ ಭೇಟಿ ನೀಡಿ ಮಾಹಿತಿ ಪಡೆದರು. ಡಿಎಸ್ಪಿ ಸಚಿನ್ ಚೆಲುವಾದಿ, ಇನ್ಸ್‌ಪೆಕ್ಟರ್ ಆನಂದ, ರಾಯಚೂರು ಲೋಕಾಯುಕ್ತ ಎಸ್ಪಿ ಸತೀಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಲೋಕಾಯುಕ್ತ ನ್ಯಾ.ಎ.ವಿ.ಪಾಟೀಲ್ ನೇತೃತ್ವದಲ್ಲಿ ಪರಿಶೀಲನೆ
ಲಿಂಗಸುಗೂರು: ಪಟ್ಟಣದ ವಿವಿಧ ಇಲಾಖೆಗಳ ಕಚೇರಿಗಳಿಗೆ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ಎ.ವಿ. ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ, ಕಡತಗಳನ್ನು ಪರಿಶೀಲನೆ ಮಾಡಿದರು. 
ಪುರಸಭೆಗೆ ಲೋಕಾಯುಕ್ತ ನ್ಯಾ. ಎ.ವಿ.ಪಾಟೀಲ್, ಹೊಸಪೇಟೆ ಲೋಕಾಯುಕ್ತ ಡಿಎಸ್ಪಿ ಸಚಿನ್ ಚೆಲುವಾದಿ, ಬೆಂಗಳೂರು ಲೋಕಾಯುಕ್ತ ಕಚೇರಿ ಇನ್ಸ್ಸ್‌ಪೆಕ್ಟರ್ ಆನಂದ, ರಾಯಚೂರು ಲೋಕಾಯುಕ್ತ ಎಸ್ಪಿ ಸತೀಶ ತಂಡ ಕಡತಗಳನ್ನು ಪರಿಶೀಲಿಸಿ, ಸಮರ್ಪಕ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿ ವಿರುದ್ಧ ಹರಿಹಾಯ್ದರು. 
ಉದ್ಯಾನ, ಸಿ.ಎ. ಸೈಟ್‌ಗಳ ಮಾರಾಟ, ವಿವಿಧ ಯೋಜನೆಗಳ ಅನುದಾನ ಬಳಕೆ ಕುರಿತು ವ್ಯೆವಸ್ಥಾಪಕ ಹನಮಂತರಾಯ ನಾಯಕ ಅವರಿಂದ ಮಾಹಿತಿ ಪಡೆದರು. ಸಿಬ್ಬಂದಿ ಎಷ್ಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಸಿಬ್ಬಂದಿ ವರ್ಗಾವಣೆಯಾದರೂ ಬಿಡುಗಡೆ ಮಾಡದ ಕಾರಣ ತರಾಟೆ ತೆಗೆದುಕೊಂಡರು. 
ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಬೆಳಗಾವಿ ಲೋಕಾಯುಕ್ತ ಕಚೇರಿ ಡಿಎಸ್ಪಿ ಭರತ ರೆಡ್ಡಿ, ಬೆಂಗಳೂರು ಲೋಕಾಯುಕ್ತ ಕಚೇರಿ ಇನ್ಸ್‌ಪೆಕ್ಟರ್ ರಾಜಶೇಖರಯ್ಯ ಭೇಟಿ ನೀಡಿ ಕೃಷಿ ಇಲಾಖೆಗೆ ಸಂಬಂಧಪಟ್ಟ ಕೃಷಿ ಹೊಂಡಗಳ ನಿರ್ಮಾಣ, ಬೀಜಗಳ ಮಾರಾಟ, ರೈತರಿಗೆ ಒದಗಿಸುವ ಸಹಾಯಧನಗಳ ಬಗ್ಗೆ ದಾಖಲೆ ಪರಿಶೀಲಿಸಿ, ಎಡಿಸಿ ಮಲ್ಲಿಕಾರ್ಜುನ ಅವರಿಂದ ಮಾಹಿತಿ ಪಡೆದರು. 
ಉಪ ನೋಂದಣಿ ಕಚೇರಿಗೆ ಬೆಂಗಳೂರು ಲೋಕಾಯುಕ್ತ ಕಚೇರಿ ಇನ್ಸ್‌ಪೆಕ್ಟರ್ ಶ್ರೀಕಾಂತ, ಧಾರವಾಡ ಲೋಕಾಯುಕ್ತ ಕಚೇರಿ ಇನ್ಸ್‌ಪೆಕ್ಟರ್ ಕರುಣೇಶಗೌಡ ಭೇಟಿ ನೀಡಿ, ಮಧ್ಯವರ್ತಿಗಳ ಹಾವಳಿ, ನೋಂದಣಿ ಸಮಯದಲ್ಲಿ ವಿಳಂಬ ಕುರಿತು ಹಲವರು ನೀಡಿದ ದೂರುಗಳನ್ನು ಆಲಿಸಿದರು. ತಹಸಿಲ್ ಕಚೇರಿಗೆ ಬೆಂಗಳೂರು ಲೋಕಾಯುಕ್ತ ಕಚೇರಿಯ ಡಿಎಸ್ಪಿ ಮಧುಸೂದನರೆಡ್ಡಿ, ಇನ್ಸ್‌ಪೆಕ್ಟರ್ ರಾಮಣ್ಣ ವಿವಿಧ ಕಡತಗಳ ಪರಿಶೀಲನೆ ಮಾಡಿದರು. ಕೆಆರ್‌ಐಡಿಎಲ್ ಕಚೇರಿಗೂ ಲೋಕಾಯುಕ್ತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಪ್ಪಿತಸ್ಥರ ವಿರುದ್ಧ ಸುಮೋಟೋ ಕೇಸ್ 

ಲಿಂಗಸುಗೂರು: ವಿವಿಧ ಇಲಾಖೆಗಳ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಲೋಕಾಯುಕ್ತ ಆರು ತಂಡಗಳು ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದಲ್ಲಿ ಲೋಪ ಎಸಗಿರುವುದು ಕಂಡುಬಂದರೆ ಅಂಥವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಾಧೀಶ ಎ.ವಿ. ಪಾಟೀಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹತಿಯನ್ನು ಲೋಕಾಯುಕ್ತ ನ್ಯಾಯಮೂರ್ತಿಗಳ ಕಚೇರಿಗೆ ಒಪ್ಪಿಸಲಾಗುವುದು. ಎಲ್ಲ ಕಡತಗಳನ್ನು ಪರಿಶೀಲಿಸಿ ಕರ್ತವ್ಯದಲ್ಲಿ ಲೋಪ ಎಸಗಿರುವುದು ಕಂಡುಬಂದಲ್ಲಿ ಅಂಥ ಅಧಿಕಾರಿ, ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗುವುದು. 
ರಾಜ್ಯ ಲೋಕಾಯುಕ್ತ ಕಚೇರಿಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ ಆಯಾ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ನೋಟಿಸ್ ನೀಡಿ ಸುಮೋಟೋ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದರು. ರಾಯಚೂರು ಲೋಕಾಯುಕ್ತ ಎಸ್ಪಿ ಸತೀಶ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net