ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾದರೆ ಸಾಕು, ಮದುವೆ ಕಾರ್ಯಕ್ರಮ, ಪ್ರವಾಸಕ್ಕೆ ಹೊಗಬೇಕೆಂದು ಸಾರ್ವಜನಿಕರು ಇಚ್ಚಿಸುತ್ತಾರೆ. ಆದರೆ ಮನೆ ಕಳ್ಳತನವಾದರೆ ಕಷ್ಟವೆಂದು ಆಸೆ ಇದ್ದರು ಮನೆಯಲ್ಲಿಯೇ ಉಳಿದುಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ಕಳ್ಳತನದ ಭಯವಿಲ್ಲದೇ ಮನೆಗೆ ಬೀಗ ಹಾಕಿಕೊಂಡು ಹಬ್ಬಹರಿದಿನ, ಮದುವೆ, ಪ್ರವಾಸ ಹೀಗೆ ವಾರಗಟ್ಟಲೇ ಭಯವಿಲ್ಲದೆ ಹೊರಗೆ ತೆರಳಲು ಪೊಲೀಸ್ ಇಲಾಖೆ ಹೊಸದಾಗಿ ಲಾಕ್ಟ್ ಹೌಸ್ ಬೀಟ್ ಸಿಸ್ಟಮ್ ವ್ಯವಸ್ಥೆ ಜಾರಿ ಮಾಡಿದೆ.
ಜಿಲ್ಲೆಯಲ್ಲಿ ಇಚೇಗೆ ಕಳ್ಳತನ ಪ್ರಕರಣಳನ್ನು ಹೆಚ್ಚಳವಾಗಿದ್ದು, ಮನೆ ಮಾಲೀಕರು ಸ್ಥಳೀಯ ಠಾಣೆಗೆ ಯಾವುದೇ ಮಾಹಿತಿ ನೀಡದೆ ದೂರದ ಊರಿಗೆ ತೆರಳುತ್ತಿದ್ದು, ಕಳ್ಳರು ಮನೆಯಲ್ಲಿನ ಯಾರು ಇಲ್ಲದೆ ಸಮಯದಲ್ಲಿ ಮನೆ ಕಳ್ಳತನ ಮಾಡಿ ಪರಾರಿಯಾಗಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಈ ಕಳ್ಳತನಗಳನ್ನು ತಡೆಯಲು ಲಾಕ್ಟ್ ಹೌಸ್ ಬೀಟ್ ಸಿಸ್ಟಮ್ ಜಾರಿ ಮಾಡಿದ್ದು, ಠಾಣೆಗೆ ಮಾಹಿತಿ ನೀಡಿದ ಮನೆಯನ್ನು ದಿನದ 24 ಗಂಟೆ ಪೊಲೀಸರು ನಿಗಾವಹಿಸುತ್ತಿದ್ದಾರೆ.
ಬೀಟ್ ಪೊಲೀಸರು ಕಾವಲು
ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಹೋಗುವ ಮುನ್ನ ಹತ್ತಿರದ ಠಾಣೆಯ ಸಂಖ್ಯೆಗೆ ಮನೆಯಿಂದ ಹೊರಗೆ ಹೋಗುವ ಹಾಗೂ ಮರಳಿ ಬರುವ ದಿನಾಂಕ, ಮನೆಯ ಪೂರ್ಣ ವಿಳಾಸ ಮತ್ತು ಲೊಕೇಷನ್ ಸೆಲ್ಫಿಯೊಂದಿಗೆ ಮನೆಯ ಮುಂಭಾಗದ ಒಂದು ಫೋಟೊ ವಾಟ್ಸ್‌ಆ್ಯಪ್ ಮಾಡಿದರೆ ಆಗ ಸಂಬಂಧಿಸಿದವರ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದುಕೊಂಡು ದಿನದ 24 ಗಂಟೆ ಮನೆಯ ಮೇಲೆ ನಿಗಾ ವಹಿಸಲಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 23 ಠಾಣೆಗಳಿದ್ದು, ಈ ಪೈಕಿ ರಾಯಚೂರಿನ ಸದರ್‌ಬಜರ್ 08, ನೇತಾಜಿನ ನಗರ 07,ಪಶ್ಚಿಮ ಠಾಣೆ 09, ಮಾರ್ಕೇಟ್ ಯಾರ್ಡ್ 05, ಗ್ರಾಮೀಣ ಠಾಣೆ 03, ಶಕ್ತಿ ನಗರ 02,ಯಾಪಲದಿನ್ನಿ 02, ಯರಗೇರಾ,ಇಡಪನೂರು ತಲಾ 01, ಸಿಂಧನೂರು ನಗರ 06,ಸಿಂಧನೂರು ಗ್ರಾಮೀಣ, ತುರವಿಹಾಳ ತಲಾ 01, ಬಳಗನೂರು 02, ಮಸ್ಕಿ 02, ಮಾನ್ವಿ 04, ಸಿರವಾರ 02, ಕವಿತಾಳ 01, ಲಿಂಗಸುಗೂರು 04, ಹಟ್ಟಿ 02,ಮುದಗಲ್ 02, ದೇವದುರ್ಗ 04, ಜಾಲಹಳ್ಳಿ 02, ಗಬ್ಬೂರು 02 ಸೇರಿ ಒಟ್ಟು 73 ಬೀಟ್‌ಗಳಲ್ಲಿ ಪೊಲೀಸರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಎಷ್ಟು ಮನೆಗಳ ಗುರುತು
ಜಿಲ್ಲೆಯ ಪ್ರಸ್ತುತ ಸಾಲಿನಲ್ಲಿ ಪೊಲೀಸರು ಒಟ್ಟು 21,543 ಬೀಗ ಹಾಕಿದ ಮನೆಗಳಿಗೆ ತಪಾಸಣೆ ಮಾಡಿದ್ದು, ಇದರಲ್ಲಿ ಸುಮಾರು 20,000 ಮನೆಗಳನ್ನು ಪೊಲೀಸರೇ ಸ್ವತಃ ಗುರುತಿಸಿದ್ದಾರೆ. ಜತೆಗೆ ಸುಮಾರು 1,128 ಜನರು ಗೋವಾ, ಮುಂಬೈ, ಅಂಡಮಾನ ಸೇರಿ ವಿವಿಧ ಪ್ರದೇಶಗಳಿಗೆ ತೆರಳುವ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ, ತಮ್ಮ ಮನೆಗಳನ್ನು ತಪಾಸಣೆ ಮಾಡುವಂತೆ ಸ್ವತಃ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ’ಸ್ಮಾರ್ಟ್ ಇ-ಬೀಟ್’ ಎನ್ನುವ ಮೊಬೈಲ್ ಅಪ್ಲಿಕೇಶನ್ ಬಳಸಿ ಮನೆಗೆ ಭೇಟಿ ನೀಡಿದಗೆಲ್ಲ ಇ- ಬಿಟ್ ಅ್ಯಪ್ ಮೂಲಕ ಮಾಹಿತಿ ದಾಖಲು ಮಾಡಲಾಗುತ್ತಿದೆ ಇದರಿಂದ ಮನೆಗೆ ಯಾರೇ ಬಂದರು ಹತ್ತಿರದ ಠಾಣೆಗೆ ಮಾಹಿತಿ ದಾಖಲಾಗುತ್ತಿದೆ. ಇದರಿಂದ ಸಾರ್ವಜನಿಕರು ತಮ್ಮ ಮನೆಯ ಬಗ್ಗೆ ಯಾವುದೇ ಭಯವಿಲ್ಲದೆ ಮನೆ ಬಿಟ್ಟು ಹೋಗಬಹುದೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.