ಜಾಲಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಹೊಲಿಗೆ ಯಂತ್ರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಪ್ರಮಾಣಪತ್ರ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಜ್ಞಾನವಿಕಾಸ ಯೋಜನೆ ಸಮನ್ವಯಾಧಿಕಾರಿ ಅಶ್ವಿನಿ ಇತರರಿದ್ದರು.
ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ರಾಘವೇಂದ್ರ ಪಟಗಾರ ಸಲಹೆ
ದೇವದುರ್ಗ ಜಾಲಹಳ್ಳಿ ಹೊಲಿಗೆ ಯಂತ್ರ ತರಬೇತಿ ಶಿಬಿರ
ದೇವದುರ್ಗ: ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕಿದೆ. ದುಡಿಮೆಯಿಂದ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರಾಘವೇಂದ್ರ ಪಟಗಾರ ಹೇಳಿದರು.
ತಾಲೂಕಿನ ಜಾಲಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಹೊಲಿಗೆ ಯಂತ್ರ ತರಬೇತಿ ಶಿಬಿರದಲ್ಲಿ ಗುರುವಾರ ಮಾತನಾಡಿದರು. ಮಹಿಳೆಯರು ಸಣ್ಣ ವ್ಯಾಪಾರ, ಸ್ವಯಂ ಉದ್ಯೋಗ ಕೈಗೊಳ್ಳಲು ಸಂಘದಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಹೊಲಿಗೆಯಂತ್ರ ತರಬೇತಿ ಶಿಬಿರ ಉಚಿತವಾಗಿ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಕುಟುಂಬ ಮುನ್ನಡೆಸಬೇಕು ಎಂದು ತಿಳಿಸಿದರು.
ಜಾಲಹಳ್ಳಿ ಠಾಣೆ ಪಿಎಸ್‌ಐ ವೈಶಾಲಿ ಝಳಕಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವಿಭಕ್ತ ಕುಟುಂಬ ಇದ್ದಾಗ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತಿತ್ತು. ಇಂದು ಅದರ ಕೊರತೆ ಕಾಡುತ್ತಿದೆ. ಮಹಿಳೆಯರಲ್ಲಿ ಹಣಕಾಸಿನ ಶಿಸ್ತು, ಬದ್ಧತೆ ಕಾಣಬಹುದು. ಹೀಗಾಗಿ ಸಂಘ-ಸಂಸ್ಥೆಗಳು, ಬ್ಯಾಂಕ್‌ಗಳು ವಿವಿಧ ಯೋಜನೆಗಳನ್ನು ಮಹಿಳೆಯರಿಗಾಗಿ ರೂಪಿಸಿವೆ ಎಂದರು.
ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಮೇಲ್ವಿಚಾರಕ ಶಿವರಾಜ, ಜ್ಞಾನವಿಕಾಸ ಯೋಜನೆ ಸಮನ್ವಯಾಧಿಕಾರಿ ಅಶ್ವಿನಿ, ಟೇಲರಿಂಗ್ ತರಬೇತುಗಾರ್ತಿ ವಿಜಯಲಕ್ಷ್ಮೀ, ಒಕ್ಕೂಟದ ಅಧ್ಯಕ್ಷ ಅಕ್ಕಮಹಾದೇವಿ, ಪತ್ರಕರ್ತ ಗಿರಿಯಪ್ಪ ಪೂಜಾರಿ ಇದ್ದರು.