ಕವಿತಾಳ: ರಾತ್ರಿ ಸಮಯದಲ್ಲಿ ದೀಪಗಳನ್ನು ಬೆಳಗಿದರೆ ಮೃತರ ಆತ್ಮಗಳಿಗೆ ಮುಕ್ತಿ ದೊರೆಯುತ್ತದೆ ಎಂದು ಪುಣೆಯ ವಾಸ್ತುತಜ್ಞ ಸಂಜೀವ ಜೋಷಿ ಹೇಳಿದರು.
ಸಮೀಪದ ಅಮೀನಗಡ ಗ್ರಾಮದ ಹುಚ್ಚಬುಡ್ಡೇಶ್ವರ ದೇವಸ್ಥಾನದಲ್ಲಿ ಶ್ರೀ ಗುರು ರಾಘವೇಂದ್ರ ಭಕ್ತರಿಂದ ಶನಿವಾರ ಸಂಜೆ ಆಯೋಜಿಸಿದ್ದ 1111 ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ಜೀವಿ ಹುಟ್ಟುತ್ತದೆ, ಸಾಯುತ್ತದೆ. ಮನುಷ್ಯರು ಮೃತಪಟ್ಟರೆ ಪದ್ಧತಿಯಂತೆ ಅಂತ್ಯಸಂಸ್ಕಾರ ಮಾಡುತ್ತೇವೆ. ಆದರೆ, ಪ್ರಾಣಿ-ಪಕ್ಷಿಗಳ ಸಾವಾದರೆ ಅವುಗಳ ಆತ್ಮಕ್ಕೆ ನಾವು ಶಾಂತಿ ಕೋರಲು ದೇವಸ್ಥಾನದಲ್ಲಿ ದೀಪ ಬೆಳಗಿಸಬೇಕು. ಇದರಿಂದ ಪರಿಸರದಲ್ಲಿನ ಕಲುಷಿತವೂ ನಾಶವಾಗಿ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ನಾವು ಧಾರವಾಡದಿಂದ ಲಿಂಗಸಗೂರು ಮಾರ್ಗವಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದು, ಇದು 30ನೇ ವರ್ಷದ ಯಾತ್ರೆಯಾಗಿದೆ. ಅಮೀನಗಡ, ಬಾಗಲವಾಡ ಮತ್ತು ಹನುಮಪುರದಲ್ಲಿ ತಂಗುತ್ತಿದ್ದು, ಬುಧವಾರ ಹನುಮಪುರದಿಂದ ಮಂತ್ರಾಲಯದವರೆಗೆ ಮೆರವಣಿಗೆ ಮೂಲಕ ತೆರಳಲಿದ್ದೇವೆ. ಈ ವೇಳೆ 10 ಸಾವಿರಕ್ಕೂ ಹೆಚ್ಚು ರಾಯರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರು ರಾಯರನ್ನು ಜಪಿಸಬೇಕು ಎಂದರು.