ಮಾನ್ವಿ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಜೋಳ ಖರೀದಿ ಮಾಡಿ ನಾಲ್ಕು ತಿಂಗಳಾಗಿದ್ದರೂ ರೈತರ ಖಾತೆಗೆ ಇದುವರೆಗೆ ಹಣ ಜಮಾ ಮಾಡದಿರುವುದನ್ನು ಖಂಡಿಸಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ತಾಲೂಕು ಘಟಕದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಜಿಲ್ಲೆಯ ಐದು ತಾಲೂಕಗಳನ್ನು ಬರಪ್ರದೇಶ ಎಂದು ಘೋಷಣೆ ಮಾಡಿದ್ದು, ಮಾನ್ವಿ, ಸಿರವಾರ ಮತ್ತು ಸಿಂಧನೂರು ತಾಲೂಕುಗಳನ್ನು ಕೂಡ ಬರಪ್ರದೇಶವೆಂದು ಘೋಷಣೆ ಮಾಡಬೇಕು. ತುಂಗಭದ್ರಾ ಎಡದಂಡೆ ನಾಲೆಯ ಎಲ್ಲ ಉಪಕಾಲುವೆಗಳ ಹೂಳು ತೆಗೆದು ಕೊನೆಯ ಭಾಗದವರೆಗೆ ನೀರು ಹರಿಸಬೇಕು. ಅನಧಿಕೃತವಾಗಿ ನೀರು ಪಡೆಯುವುದನ್ನು ತಡೆಯಬೇಕು ಎಂದು ಆಗ್ರಹಿಸಲಾಯಿತು.
ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಸುವಾಗ ಮುಂಗಾರು-ಹಿಂಗಾರು ಎಂದು ತಾರತಮ್ಯ ಮಾಡದೆ ಎಲ್ಲವನ್ನೂ ಮುಂಗಾರು ಎಂದು ಪರಿಗಣಿಸಬೇಕು. ಜಿಲ್ಲೆಯಲ್ಲಿ ಮಳೆಯಿಲ್ಲದೆ ಕೃಷಿಗೆ ನೀರಿನ ತೊಂದರೆಯಾಗಿದ್ದು, ಪ್ರತಿ ದಿನ ಪಂಪ್‌ಸೆಟ್ ಗಳಿಗೆ 10 ತಾಸು ವಿದ್ಯುತ್ ಕೊಡಬೇಕು. ಪಶುವೈದ್ಯರ ಭರ್ತಿಗೆ ಕ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆಗಳನ್ನು ದುರಸ್ತಿಪಡಿಸಿ ಪ್ರತಿ ಹಳ್ಳಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ಉಪಾಧ್ಯಕ್ಷರಾದ ದೊಡ್ಡ ಬಸನಗೌಡ ಬಲ್ಲಟಗಿ, ಸೂಗೂರಯ್ಯ ಆರ್.ಆರ್.ಎಸ್.ಮಠ, ಯಂಕಪ್ಪ ಕಾರಬಾರಿ, ತಾಲೂಕು ಅಧ್ಯಕ್ಷ ಶಂಕ್ರಪ್ಪಗೌಡ, ಪ್ರಮುಖರಾದ ಪ್ರಭಾಕರ ಪಾಟೀಲ್, ಬಸವರಾಜ ಪಾಟೀಲ್, ಅಮರೇಶ ಆಲ್ದಾಳ, ಹನುಮಗೌಡ ಜಾಲಹಳ್ಳಿ, ದೇವರಾಜ ನಾಯಕ, ಸಿದ್ದಯ್ಯಸ್ವಾಮಿ ಇನ್ನಿತರರು ಇದ್ದರು.