ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿ 12 ದಿನಗಳಾದರೂ ಸಿರವಾರ ತಾಲೂಕಿನಲ್ಲಿ ನಾಲೆ ಕೊನೆಯ ಭಾಗಕ್ಕೆ ತಲುಪಿಲ್ಲ. ಇದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವೈಫಲ್ಯವಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಂಗಳವಾರ ಮಾತನಾಡಿದರು. ಸಿರವಾರ ಮತ್ತು ಯರಮರಸ್ ವಿಭಾಗಕ್ಕೆ ಸಮರ್ಪಕ ನೀರು ಬಾರದಿರಲು ಗಂಗಾವತಿ, ವಡ್ಡರಹಟ್ಟಿ, ಕಾರಟಗಿ, ತುರ್ವಿಹಾಳ್ ವಿಭಾಗದಲ್ಲಿ ಅನಧಿಕೃತವಾಗಿ ಲಕ್ಷಾಂತರ ಎಕರೆ ನೀರಾವರಿ ಇರುವುದು ಮುಖ್ಯ ಕಾರಣ ಎಂದು ದೂರಿದರು.
ಮುಖ್ಯನಾಲೆ ಮತ್ತು ಉಪ ಕಾಲುವೆಗಳಿಂದ ಅನಧಿಕೃತವಾಗಿ ನೀರನ್ನು ಪಂಪ್‌ಸೆಟ್ ಮುಖಾಂತರ ಉಪಯೋಗಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸಿರವಾರ, ಮಾನ್ವಿ ಹಾಗೂ ರಾಯಚೂರು ತಾಲೂಕುಗಳ ರೈತರು ಹತಾಶರಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲೇ ಹೆಚ್ಚು ಅನಧಿಕೃತ ನೀರಾವರಿ ಪ್ರದೇಶ ಇರುವುದರಿಂದ ಮೈಲ್ 47ರಲ್ಲಿ ನೀರು ಕಡಿಮೆ ಬರುತ್ತಿದೆ. ಈ ಕುರಿತು ಕೊಪ್ಪಳ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾಲುವೆ ನೀರಿನ ನಿರ್ವಹಣೆ ಜವಾಬ್ದಾರಿಯನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ವಹಿಸಬೇಕು. ತುಂಗಭದ್ರಾ ಎಡದಂಡೆ ಕಾಲುವೆ ಮೈಲ್ 69 ರಿಂದ 104ರವರೆಗೆ ನಿಗದಿತ ಗೇಜ್ ನಿರ್ವಹಣೆ ಮಾಡಬೇಕು. ಮೈಲ್ 47ರಲ್ಲಿ 12 ಅಡಿ, 69ರಲ್ಲಿ ಒಂಬತ್ತು ಅಡಿ, ಮೈಲ್ 104ರಲ್ಲಿ ಆರು ಅಡಿ ಗೇಜ್ ನಿರ್ವಹಣೆ ಮಾಡಬೇಕು. ಮೈಲ್ 69ರಲ್ಲಿನ ಗೇಜ್ ಸರಿಯಾಗಿಲ್ಲ. ಕೂಡಲೇ ಗೇಜ್ ಸರಿಪಡಿಸಬೇಕು. ಸಿರವಾರ ವಿಭಾಗದ ಎಲ್ಲ ಉಪ ಕಾಲುವೆಗಳ ಹೂಳು ಮತ್ತು ಜಂಗಲ್ ತೆರವು ಮಾಡಬೇಕು. ತುಂಗಭದ್ರಾ ಎಡದಂಡೆ ನಾಲೆ ನೀರು ನಿರ್ವಹಣೆ ಮಾಡಲು ಸಿಬ್ಬಂದಿ ಕೊರತೆ ಇದ್ದು, ಅದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ನೀರು ಹರಿಸುವ ಭರವಸೆ ನೀಡಿದರು. ಆದರೆ ವಿಭಾಗೀಯ ಆಯುಕ್ತರು ಆಗಮಿಸಿ ನೀರು ಹರಿಸುವ ಭರವಸೆ ನೀಡಿದರೆ ಮಾತ್ರ ಧರಣಿ ಹಿಂಪಡೆಯಲಾಗುವುದು ಎಂದು ಪಟ್ಟು ಹಿಡಿದರು. ಬುಧವಾರ ಸಿರವಾರ ಬಂದ್ ನಡೆಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದರು.