ಮುದಗಲ್ ಸಮೀಪದ ತೊಂಡಿಹಾಳ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಲಿಂಗಸಗೂರು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ನಾಗಭೂಷಣ, ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್ ಇತರರಿದ್ದರು.
ಮುದಗಲ್: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಸಿದರೆ ಸಾಲದು ಅವರ ರಾಷ್ಟ್ರಪ್ರೇಮ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ಡಿ.ವಜ್ಜಲ ಹೇಳಿದರು.
ಸಮೀಪದ ತೊಂಡಿಹಾಳ ಗ್ರಾಮದಲ್ಲಿ ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ರಾಷ್ಟ್ರ ಪ್ರೇಮದ ಆದರ್ಶಗಳನ್ನು ಅಳವಡಿಸಿಕೊಂಡರೆ ರಾಯಣ್ಣ ಅವರಿಗೆ ಗೌರವ ಸಲ್ಲುತ್ತದೆ. ರಾಯಣ್ಣ ಕ್ರಾಂತಿಕಾರಕ ಧೋರಣೆಗೆ ಹೆಸರಾಗಿದ್ದರು.
ಅವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಮಾದರಿ ಎಂದರು. ಕನಕ ಗುರುಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ರಾಯಣ್ಣನಂಥ ನಾಯಕರನ್ನು ಪರಿಚಯಿಸಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ತಾಲೂಕು ಉಪಾಧ್ಯಕ್ಷ ಹುಲ್ಲಪ್ಪ ವಾಲಿಕಾರ, ಪಿಡಿಒ ಶಶಿಕಲಾ ಪಾಟೀಲ್, ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್, ಗ್ರಾಪಂ ಅಧ್ಯಕ್ಷೆ ಸಂಗಮ್ಮ ಗೌಂಡಿ, ಉಪಾಧ್ಯಕ್ಷ ವೆಂಕಮ್ಮ ವೆಂಕಯ್ಯ, ಪ್ರಮುಖ ಶಂಕರ ವಾಲಿಕಾರ ಇತರರಿದ್ದರು.