ಮಾನ್ವಿ: ಪರಿಸರ ರಕ್ಷಣೆ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಮಳೆ, ಬೆಳೆ ಹಾಗೂ ಉತ್ತಮ ಗಾಳಿ ಸಿಗುತ್ತದೆ. ಇದರಿಂದ ಎಲ್ಲರೂ ಆರೋಗ್ಯದಿಂದ ಇರಲು ಸಹಕಾರಿಯಾಗಲಿದೆ ಎಂದು ಮುಖ್ಯಶಿಕ್ಷಕ ಈಶಪ್ಪ ಹೇಳಿದರು.
ಚೀಕಲಪರ್ವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರು ಪ್ರಮುಖ ಪಾತ್ರ ವಹಿಸಬೇಕು. ಪರಿಸರ ಕುರಿತ ನಿಷ್ಕಾಳಜಿಯಿಂದ ಮಳೆಯಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಆನುಭವಿಸಬೇಕಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲೆಯ ಆವರಣದಲ್ಲಿ ವಿವಿಧ ಸಸಿಗಳನ್ನು ನೆಟ್ಟು, ಅವುಗಳ ಪಾಲನೆ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸಲಾಯಿತು. ಸ್ವಸಹಾಯ ಸಂಘದ ಅಧ್ಯಕ್ಷೆ ಜಾನಮ್ಮ, ಪ್ರಮುಖರಾದ ಅನ್ನಮ್ಮ, ದುರ್ಗಮ್ಮ, ದೀಪಿಕಾ, ರವೀಂದ್ರ ಜಾನೇಕಲ್ ಇತರರಿದ್ದರು.