ವಿದ್ಯುತ್ ಖಾಸಗಿಕರಣ ವಿರೋಧಿಸಿ ಕೆಪಿಟಿಸಿಎಲ್ ನೌಕರರ ಪ್ರತಿಭಟನೆ
ಸಾರ್ವಜನಿಕರ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿಗೆ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡಲು ಪರವಾನಿಗೆ ನೀಡಬಾರದೆಂದು ಒತ್ತಾಯಿಸಿ ಬುಧವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಮತ್ತು ನೌಕರರ ಸಂಘಗಳ ಒಕ್ಕೂಟದ ವತಿಯಿಂದ ರಾಯಚೂರಿನ ಕೆಪಿಟಿಸಿಎಲ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಪ್ರಮುಖರಾದ ಜೆ.ಎಲ್.ಗೋಪಿ, ಸಂಜೀವ ಕುಮಾರ, ನರಸಪ್ಪ ಮಣ್ಣಿಗಿರಿ, ವೆಂಕಟೇಶ, ಮಲ್ಲಣ್ಣ, ಶಿವಮೂರ್ತಿ, ರಾಮಕೃಷ್ಣ ಇದ್ದರು.
ರಾಯಚೂರು ಸಾರ್ವಜನಿಕರ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿಗೆ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡಲು ಪರವಾನಿಗೆ ನೀಡಬಾರದೆಂದು ಒತ್ತಾಯಿಸಿ ಬುಧವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಮತ್ತು ನೌಕರರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಕೆಪಿಟಿಸಿಎಲ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಮುಂಬೈನ ಟಾಟಾ ಪವರ್ ಕಂಪನಿಯು ಜೆಸ್ಕಾಂ ವ್ಯಾಪ್ತಿಯ ರಾಯಚೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿದರು.ಗೃಹಜ್ಯೋತಿ, ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಸರ್ಕಾರದ ಯೋಜನೆಗಳು ರದ್ದಾಗುವ ಸಾಧ್ಯತೆ ಇದ್ದು
, ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಹಾಗೂ ಸಬ್ಸಿಡಿ ಸೌಲಭ್ಯಗಳು ಸ್ಥಗಿತಗೊಳ್ಳುವ ಅಪಾಯವಿದೆ. ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದಿಂದ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಬಡವರು, ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ದೊರೆಯುತ್ತಿರುವ ಮೀಸಲಾತಿಗೆ ಧಕ್ಕೆಯಾಗಲಿದೆ. ವಿದ್ಯುತ್ ದರ ಏರಿಕೆಯಿಂದ ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಸಾವಿರಾರು ವಿದ್ಯುತ್ ಗುತ್ತಿಗೆದಾರರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಮದು ದೂರಿದರು.
ಅನೇಕ ನೌಕರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಟ್ಟಿಬೆಳೆಸಿರುವ ವಿದ್ಯುತ್ ವ್ಯವಸ್ಥೆಯನ್ನು ಲಾಭದ ಉದ್ದೇಶ ಹೊಂದಿರುವ ಖಾಸಗಿ ಸಂಸ್ಥೆಗಳಿಗೆ ನೀಡುವುದು ಜನಸಾಮಾನ್ಯರ ಹಿತಕ್ಕೆ ವಿರುದ್ದವಾಗಲಿದೆ ಆರೋಪಿಸಿದರು. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ಜಾಲವನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆಪಾದಿಸಿದರು.
ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಿಗಿ ಂತ ಅರ್ಧದಷ್ಟು ಸಿಬ್ಬಂದಿ ಕೊರತೆ ಇದ್ದರೂ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ, ಸಾರ್ವಜನಿಕರು, ರೈತರು ಹಾಗೂ ಕೈಗಾರಿಕೆಗಳಿಗೆ ದಕ್ಷ ಮತ್ತು ಪ್ರಾಮಾಣಿಕ ಸೇವೆ ನೀಡಲಾಗುತ್ತಿದೆ. ಹೀಗಿರುವಾಗ ಖಾಸಗೀಕರಣದ ಯಾವುದೇ ಪ್ರಯತ್ನವನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜೆ.ಎಲ್.ಗೋಪಿ, ಸಂಜೀವ ಕುಮಾರ, ನರಸಪ್ಪ ಮಣ್ಣಿಗಿರಿ, ವೆಂಕಟೇಶ, ಮಲ್ಲಣ್ಣ, ಶಿವಮೂರ್ತಿ, ರಾಮಕೃಷ್ಣ, ಸೇರಿದಂತೆ ಅಧಿಕಾರಿ ಮತ್ತು ನೌಕರರು ಇದ್ದರು.