

ಪ್ರಮುಖ ಮುಖ್ಯಾಂಶಗಳು
ರಾಯಚೂರು ಜಿಲ್ಲೆಯಲ್ಲಿ ಕೆಪಿಎಮ್‌ಇ ಕಾಯ್ದೆಯಡಿ ನೋಂದಾಯಿಸದ ಅಥವಾ ನಿಯಮ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿರುವ ನಕಲಿ ವೈದ್ಯರು, ಆಸ್ಪತ್ರೆಗಳು ಮತ್ತು ವ್ಯಸನ ಮುಕ್ತಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪೂವಿತಾ ಎಸ್. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾ ಕೆಪಿಎಂಇ ಕಾಯ್ದೆ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರವಾನಗೆ ಇಲ್ಲದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವೈದ್ಯರಲ್ಲದವರು ಅನಧಿಕೃತವಾಗಿ ವೈದ್ಯ ವೃತ್ತಿಯನ್ನು ಮಾಡುತ್ತಿರುವ ನಕಲಿ ವೈದ್ಯರ ಮಾಹಿತಿ ಪಡೆಯಬೇಕು. ವೈದ್ಯ ಪದವಿ ಪಡೆಯದೆ ಜನರ ಜೀವಕ್ಕೆ ತೊಂದರೆ ಉಂಟು ಮಾಡುವುದನ್ನು ತಡೆಯಲು ಎಲ್ಲ ನಕಲಿ ವೈದ್ಯರನ್ನು ಗುರ್ತಿಸಿ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕವಾಗಿ ಹಾಗೂ ಕೆಪಿಎಂಇ ಕಾಯ್ದೆ-2007ರ ಅಡಿ ಕ್ರಮ ಜರುಗಿಸಬೇಕೆಂದು ಸೂಚಿಸಿದರು.
ಮೆಡಿಕಲ್ ಅಂಗಡಿಗಳ ಮಾಲಿಕರು ಕೆಪಿಎಂಇ ಅಡಿ ಅನುಮತಿ ಪಡೆಯದೆ ಕ್ಲಿನಿಕ್‌ಗಳನ್ನು ತಮ್ಮ ಅಂಗಡಿಯ ಒಳಭಾಗ, ಪಕ್ಕದಲ್ಲಿ ತೆರೆದಿರುವುದನ್ನು ಪರಿಶೀಲಿಸಿ, ಒಂದು ವೇಳೆ ಚಿಕಿತ್ಸೆ ನೀಡುವ ವೈದ್ಯರ ಹೆಸರಿನಲ್ಲಿ ಕ್ಲಿನಿಕ್ ಇರದಿದ್ದಲ್ಲಿ ಮೆಡಿಕಲ್ ಅಂಗಡಿಗಳ ವಿರುದ್ದ ಕ್ರಮ ಜರುಗಿಸಲು ಸಹಾಯಕ ಔಷಧ ನಿಯಂತ್ರಕರಿಗೆ ಸೂಚಿಸಿದರು.
ಯಾವುದೇ ವೈದ್ಯಕೀಯ ಪದವಿ ಪಡೆದು ಆಸ್ಪತ್ರೆ ಆರಂಭಿಸುವ ಮೊದಲು ಕೆಪಿಎಮ್‌ಇ ಕಾಯ್ದೆ-2007ರಡಿ ಖಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಅನುಮತಿ ಪಡೆದ ನಂತರವೇ ಕ್ಲಿನಿಕ್, ಆಸ್ಪತ್ರೆ ಆರಂಭಿಸಬೇಕು. ಹಾಗೆಯೇ ಒಮ್ಮೆ ನೋಂದಣಿ ಮಾಡಿಸಿದ ನಂತರ 05 ವರ್ಷಗಳವರೆಗೆ ಆಸ್ಪತ್ರೆ ನಡೆಸಲು ಆನುಮತಿ ಇದ್ದು, ನೋಂದಣಿ ಅವಧಿ ಮುಗಿಯಲು ಇನ್ನೂ 03 ತಿಂಗಳು ಇರುವಾಗಲೇ ಪುನಃ ನೊಂದಣಿ ಮಾಡಿಸಲು ಸಂಬAಧಿಸಿದ ಇಲಾಖೆಯ ಅಗತ್ಯ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅಲೋಪತಿ ವಿದ್ಯಾರ್ಹತೆ ಹೊಂದಿದವರು ಅಲೋಪತಿ ಚಿಕಿತ್ಸಾ ಪದ್ದತಿ ಹಾಗೂ ಆಯುರ್ವೇದ ವೈದ್ಯಕೀಯ ಪದವಿ ಪಡೆದವರು ಆಯುಷ್ಯ ಪದ್ದತಿಯಲ್ಲಿ ಚಿಕಿತ್ಸೆ ಮಾತ್ರ ನೀಡಬೇಕು. ಒಂದು ವೇಳೆ ನಿಯಮ ಮೀರಿ ಬೇರೆ ವೈದ್ಯ ವೃತ್ತಿ ಮಾಡುತ್ತಿದ್ದರೆ ಕೆಪಿಎಮ್‌ಇ ಕಾಯ್ದೆ-2007ರಡಿ ಕ್ರಮ ಜರುಗಿಸಲಾಗುವುದು. ಅಲ್ಲದೆ ಅಂತಹವರು ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಚ್ಚರಿಕೆ ನೀಡಿದರು.
ಪ್ರಯೋಗಾಲಯಗಳ ವರದಿಯನ್ನು ಪೇಥಾಲಜಿಸ್ಟ್ ಅಥವಾ ಆಸ್ಪತ್ರೆಯ ಮುಖ್ಯ ವೈದ್ಯರ ಮೂಲಕ ಕಡ್ಡಾಯವಾಗಿ ದೃಢಪಡಿಸಿರಬೇಕು. ಜಿಲ್ಲೆಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ರಕ್ತ ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳು, ಡಯಾಗ್ನೊಸ್ಟಿಕ್ಸ್ ಕೇಂದ್ರಗಳು ಕಡ್ಡಾಯವಾಗಿ ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಸಬೇಕು. ಪ್ರಯೋಗಾಲಯದ ಪ್ರತಿ ವರದಿಗೂ ಪೇಥಾಲಜಿಸ್ಟ್ ದೃಢಿಕರಣವಾಗಿರಬೇಕು. ಮತ್ತು ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳಲ್ಲಿ ರಕ್ತ ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳು, ಡಯಾಗ್ನೊಸ್ಟಿಕ್ಸ್ ಕೇಂದ್ರಗಳು ಇದ್ದಲ್ಲಿ ಪ್ರಯೋಗಾಲಯದ ಪ್ರತಿ ವರದಿಗೂ ಆಸ್ಪತ್ರೆಯ ಮುಖ್ಯ ವೈದ್ಯರು ದೃಢೀಕರಣ ಮಾಡಿರಬೇಕು.
ಒಂದು ವೇಳೆ ನಿಯಮ ಮೀರಿದರೆ ಅಂತವರ ವಿರುದ್ಧ ಕೆಪಿಎಮ್‌ಇ ಕಾಯ್ದೆಯಡಿ ನಿಯಮಾನಯಸಾರ ಕ್ರಮ ಜರುಗಿಸಲಾಗುವುದು ಎಂದರು.
ಔಷಧಿಗಾಗಿ ಸಾರ್ವಜನಿಕರು ವೈದ್ಯರಿಂದ ಚೀಟಿ ತಂದರೆ ಮಾತ್ರ ಔಷಧಿ ವಿತರಿಸಬೇಕು. ಅದರಲ್ಲೂ ಗರ್ಭಪಾತ ಸಂಬಂಧಿತ ಔಷದಿಗಳನ್ನು ಕೊಟ್ಟಿರುವುದು ಪರಿಶೀಲನೆ ವೇಳೆ ನಿಯಮ ಮೀರಿದ್ದು, ಕಂಡು ಬಂದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವೈದ್ಯ ವೃತ್ತಿಯನ್ನು ಗೌರವದಿಂದ ನಿರ್ವಹಿಸಬೇಕು ಎಂದು ತಿಳಿಸಿದರು.
ಡಿಎಚ್ ಓ ಡಾ.ನಂದಿತಾ ಎನ್.ಎಂ ಮಾತನಾಡಿ, ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳ ವಿರುದ್ಧ ಗರಿಷ್ಠ ಪ್ರಮಾಣದ ದಂಡ ವಿಧಿಸಿ. ಕ್ಲಿನಿಕ್‌ಗಳನ್ನು ಮುಚ್ಚುವ ಜೊತೆಗೆ ಅಂತಹ ತಪ್ಪು ಮುಂದುವರಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಲ್ಲಿ 20ಮಂದಿ ನಕಲಿ ವೈದ್ಯರ ವಿರುದ್ದ ಕ್ರಮ ಕೈಗೊಂಡು, ಅವರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. 2 ಲಕ್ಷದ 20 ಸಾವಿರ ದಂಡ ವಸೂಲು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಶಿವಕುಮಾರ್ ನಾರಾ, ಸಹಾಯಕ ಔಷಧಿ ನಿಯಂತ್ರಕ ಸಚಿನ್, ಜಿಲ್ಲಾ ಅಯುಷ್ ಅಧಿಕಾರಿ ಡಾ.ಶಂಕರಗೌಡ, ಐಎಂಎ ಅಧ್ಯಕ್ಷ ಡಾ.ಶೈಲೇಶ್ ಅಮರಕೇಡ್, ಡಿಎಸ್‌ಓ ಡಾ.ಗಣೇಶ್ ಕೆ., ಡಿಟಿಓ ಡಾ.ಯಶೋಧಾ, ಡಿಎಂಓ ಡಾ.ಚಂದ್ರಶೇಖರಯ್ಯ ಸೇರಿದಂತೆ ಅನೇಕರು ಇದ್ದರು.