ದೇವದುರ್ಗ: ಕಾಯಕವೇ ಕೈಲಾಸ ಎಂದವರು ಶರಣರು. ಕಾಯಕ ಶರಣರು ಇದಕ್ಕೆ ಪ್ರತಿರೂಪ ಎನ್ನುವಂತಿದ್ದರು. ಶರಣರ ವೃತ್ತಿ ಪ್ರತಿಯೊಬ್ಬ ವ್ಯಕ್ತಿಗೆ ಪ್ರೇರಣೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ಬಸವಾದಿ ಶರಣರ ಸನ್ಮಾರ್ಗದಲ್ಲಿ ನಡೆದರೆ ಆದರ್ಶ ಬದುಕು ಕಟ್ಟಿಕೊಳ್ಳಬಹುದು.
ಯಾವುದೇ ವ್ಯಕ್ತಿಗೆ ಕೆಲಸ ಮಾಡದೇ ತಿನ್ನುವ ಹಕ್ಕಿಲ್ಲ. ಕಾಯಕದಲ್ಲಿ ಮೇಲು ಕೀಳಿಲ್ಲ. ವೃತ್ತಿಯೇ ಬದುಕಿನ ದಾರಿಯಾಗಬೇಕು. ಕಾಯಕ ಶರಣರಾದ ಮಾದರ ಚನ್ನಯ್ಯ, ಸಮಗಾರ ಹರಳಯ್ಯ, ಮಾದರ ಧೂಳಯ್ಯ, ಡೋಹಾರ ಕಕ್ಕಯ್ಯ, ಉರಿಲಿಂಗ ಪೆದ್ದಿ ನಮಗೆ ಆದರ್ಶವಾಗಿದ್ದಾರೆ ಎಂದರು.
ಪುರಸಭೆ ಮಾಜಿ ಸದಸ್ಯ ಮಾನಪ್ಪ ಮೇಸ್ತ್ರಿ, ಸಿಬ್ಬಂದಿ ಪ್ರವೀಣ್‌ಕುಮಾರ್, ಶಾಂತಮಲ್ಲಯ್ಯ ತಾತ, ಗಂಗಮ್ಮ, ಜ್ಯೋತಿ, ಪಾರ್ವತಿ ಭಾಯಿ, ಮರಿಸ್ವಾಮಿ ಮುಕ್ತುಮ್ ಇತರರಿದ್ದರು.