ಮರೀಚಿಕೆಯಾದ ಕರ್ನಾಟಕ ಒನ್ ಸೇವಾ ಕೇಂದ್ರ

ಕರ್ನಾಟಕ ಒನ್ ಸೇವಾ ಕೇಂದ್ರ
ಕರ್ನಾಟಕ ಒನ್ ಸೇವಾ ಕೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜುಗಳಿಗೆ
  • ಬೇಕಾದ
  • ಪ್ರಮಾಣಪತ್ರ
ಹಟ್ಟಿ ಚಿನ್ನದಗಣಿ: ಹಟ್ಟಿ ಚಿನ್ನದಗಣಿಯಲ್ಲಿ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರ ಇಲ್ಲದಿರುವುದರಿಂದ ಸಾರ್ವಜನಕರು ಸರ್ಕಾರದ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಬೇರೆ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರಮುಖ ಕೈಗಾರಿಕಾ ಪ್ರದೇಶವಾಗಿರುವ ಹಟ್ಟಿ ಪಟ್ಟಣದಲ್ಲಿ ರೈತರು ಸೇರಿದಂತೆ ಸಾವಿರಾರು ಕುಟುಂಬಗಳು ವಾಸವಿದ್ದು, ದಿನೇ ದಿನೆ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಇಷ್ಟು ದೊಡ್ಡ ಪಟ್ಟಣಕ್ಕೆ ಇನ್ನೂ ಕರ್ನಾಟಕ ಒನ್ ಸೇವಾ ಕೇಂದ್ರ ಸೌಲಭ್ಯ ದೊರೆಯದೇ ಇರುವುದು ದುರದೃಷ್ಟಕರವಾಗಿದೆ.
ಸರ್ಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬೇಕಾದರೆ ಹಟ್ಟಿ ಪಟ್ಟಣದ ಜನರು ಗುರುಗುಂಟಾ ಅಥವಾ ಲಿಂಗಸುಗೂರು ಹೋಗಬೇಕಾದ ಸ್ಥಿತಿ ಬಂದೊಗಿದೆ. ಪ್ರಮಾಣಪತ್ರ ಪಡೆಯಲು ದಿನವಿಡೀ ಸಮಯ ಕಳೆದು, ಹಣ ಖರ್ಚುಮಾಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಆಧಾರ್ ತಿದ್ದುಪಡಿ, ಪಿಂಚಣಿ ಯೋಜನೆಗಳು, ಜಾತಿ-ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ, ಪಡಿತರ ಕಾರ್ಡ್ ಸಂಬಂಧಿತ ಕೆಲಸಗಳು ಸೇರಿದಂತೆ ಹಲವಾರು ಸೇವೆಗಳಿಗಾಗಿ ಹಟ್ಟಿ ಜನರು ಪರದಾಡುವಂತಾಗಿದೆ.
ವೃದ್ಧರು, ಅಂಗವಿಕಲರು ಹಾಗೂ ಮಹಿಳೆಯರು ಈ ಸಮಸ್ಯೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬೇಕಾದ ಪ್ರಮಾಣಪತ್ರಗಳಿಗಾಗಿ ದೂರದ ಊರಿಗೆ ಹೋಗಬೇಕಾಗಿರುವುದರಿಂದ ಅವರ ವಿದ್ಯಾಭ್ಯಾಸಕ್ಕೂ ತೊಂದರೆ ಉಂಟಾಗುತ್ತಿದೆ.
ಹಟ್ಟಿ ಪಟ್ಟಣದಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರ ಸ್ಥಾಪನೆ ಮಾಡಬೇಕೆಂದು ಸಾರ್ವಜನಿಕರು ಅನೇಕ ಬಾರಿ ತಹಸಿಲ್ ಕಚೇರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಕೂಡ ಈ ಪ್ರಮುಖ ಬೇಡಿಕೆಗೆ ಪೂರೈಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
"

ಹಟ್ಟಿ ಪಟ್ಟಣ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ರೈತರು ಸೇರಿದಂತೆ ಸಾವಿರಾರು ಜನರು ವಾಸವಿದ್ದಾರೆ. ಸರ್ಕಾರದ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ದೂರದ ಪಟ್ಟಣಗಳಿಗೆ ಅಲೆದಾಡಬೇಕಾಗಿದೆ. ಕರ್ನಾಟಕ ಒನ್ ಕೇಂದ್ರ ಇದ್ದರೆ ಅರ್ಧ ಸಮಸ್ಯೆಗಳು ಪರಿಹಾರವಾಗುತ್ತವೆ. ಆದರೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ.

"

ಹಟ್ಟಿ ಪಟ್ಟಣದಲ್ಲಿ ಕರ್ನಾಟಕ ಒನ್ ಕೇಂದ್ರ ಇಲ್ಲದಿರುವುದು ನನಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net