ಆರು ರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣ

 ಸೋಮಣ್ಣ ಬೇವಿನಮರದ
ಸೋಮಣ್ಣ ಬೇವಿನಮರದ
Published on

ಪ್ರಮುಖ ಮುಖ್ಯಾಂಶಗಳು

  • ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬಿ. ಮಾಹಿತಿ
ಮಾನ್ವಿ: ಗಡಿಭಾಗದ ಆರು ರಾಜ್ಯಗಳಲ್ಲಿ ಕರ್ನಾಟಕ ಸರ್ಕಾರದಿಂದ ಕನ್ನಡ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಾಜ್ಯ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಗಡಿನಾಡು ಕನ್ನಡಿಗರಿಗಾಗಿ ಕನ್ನಡ ಭವನ ನಿರ್ಮಿಸುತ್ತಿದ್ದು, ಕೆಲವೆಡೆ ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದರು. ಆರು ಗಡಿನಾಡು ಹೊರ ರಾಜ್ಯಗಳ 19 ಜಿಲ್ಲೆಗಳು, 63 ತಾಲೂಕಿನಲ್ಲಿ ಕನ್ನಡ ಶಾಲೆಗಳು ಮತ್ತು ಅನುದಾನ ರಹಿತ ಶಾಲೆಗಳಿಗೆ ಕನ್ನಡ ಪುಸ್ತಕಗಳು, ಶುದ್ಧ ಕುಡಿವ ನೀರು, ಗ್ರಂಥಾಲಯ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದರು. 
ಗಡಿನಾಡು ಕನ್ನಡ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಶೇ.5 ಮೀಸಲಾತಿ ನೀಡಲಾಗಿದೆ.  ಹಲವು ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಇನ್ನೂ ಸಣ್ಣಪುಟ್ಟ ಸಮಸ್ಯೆಗಳಿದ್ದು, ಆದಷ್ಟು ಬೇಗ ನಿವಾರಿಸುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸಲಾಗುವುದು. ಮಹಾರಾಷ್ಟ್ರ ಸರ್ಕಾರ 100ಕ್ಕೂ ಹೆಚ್ಚು ಕನ್ನಡ ಶಿಕ್ಷಕರನ್ನು ನೇಮಿಸಿ ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದ ಅವರು, ಗಡಿನಾಡು ಕನ್ನಡ ಪ್ರದೇಶಗಳಲ್ಲಿ ಗಡಿ ಉತ್ಸವ ಆಚರಣೆಗೆ ಪ್ರಾಧಿಕಾರದಿಂದ 5 ಲಕ್ಷ ರೂ. ಅನುದಾನ ನೀಡಲಾಗಿತ್ತು. ತೆಲಂಗಾಣದ ಕೃಷ್ಣದಲ್ಲಿ ಉತ್ಸವ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ತಿಳಿಸಿದರು. 
ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ವೀರಶೈವ ಲಿಂಗಾಯತ ರಾಜ್ಯ ಸಮಿತಿ ಸದಸ್ಯ ಸಿದ್ದಲಿಂಗಪ್ಪ ಚಿಕ್ಕಕೊಟ್ನೆಕಲ್ ವಕೀಲ, ಮಲ್ಲನಗೌಡ ವಕೀಲ, ತಿಮ್ಮರಡ್ಡಿ ಭೋಗಾವತಿ, ಶೇಖರಪ್ಪ ವಕೀಲ, ಮಲ್ಲಿಕಾರ್ಜುನಗೌಡ ಗಣೇಕಲ್, ಬಸವರಾಜ ಹರನಹಳ್ಳಿ, ಡಾ. ಚಂದ್ರಶೇಖರ ಸುವರ್ಣಗಿರಿಮಠ, ಮಲ್ಲಭದ್ರಗೌಡ ನೀರಮಾನ್ವಿ, ವೀರನಗೌಡ ವಕೀಲ, ಶರಣಪ್ಪಗೌಡ ನಕ್ಕುಂದಿ, ಶರಣಪ್ಪ ಮೇಟಿ ಇತರರಿದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net