ಸಿಂಧನೂರಿನ ಟೌನ್‌ಹಾಲ್‌ನಲ್ಲಿ ಮಂಗಳವಾರ ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡ ಪಾದಯಾತ್ರೆ ಮತ್ತು ಜಲ-ಜನಜಾಗೃತಿ ಕಾರ್ಯಕ್ರಮವನ್ನು ಅಭಿಯಾನದ ಹಾಡು ಬಿಡುಗಡೆ ಮಾಡುವ ಮೂಲಕ ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ಉದ್ಘಾಟಿಸಿದರು
ಸಿಂಧನೂರು: ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ನದಿಗೂ ಅಪಾಯ ಕಾದಿದ್ದು, ನಾವೆಲ್ಲ ಕಳಕಳಿ ಹೊಂದಬೇಕಿದೆ. ಇಲ್ಲವಾದರೆ ಮುಂದೊಂದು ದಿನ ಕಲುಷಿತ ನೀರು ಕುಡಿವ ಪರಿಸ್ಥಿತಿ ಎದುರಾಗಬಹುದು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಟೌನ್‌ಹಾಲ್‌ನಲ್ಲಿ ಮಂಗಳವಾರ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ (ನವದೆಹಲಿ) ಮತ್ತು ಪರ್ಯಾವರಣ ಟ್ರಸ್ಟ್ ವತಿಯಿಂದ ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಗಂಗಾವತಿ ತಾಲೂಕಿನ ಕಿಷ್ಕಿಂಧೆಯಿಂದ ಮಂತ್ರಾಲಯದವರೆಗೆ ಹಮ್ಮಿಕೊಂಡಿರುವ 3ನೇ ಹಂತದ ಪಾದಯಾತ್ರೆ ಮತ್ತು ಜಲ-ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಇದ್ದ ನೀರಿನ ಶುದ್ಧತೆ ಇಂದಿಲ್ಲ. ಈ ಬಗ್ಗೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನದಿ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳನ್ನು ಊಹಿಸಿಕೊಳ್ಳಲು ಅಸಾಧ್ಯ. ತುಂಗಭದ್ರಾ ನೀರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯತೆಯಿದೆ. ಈ ಅಭಿಯಾನ ಸ್ತುತ್ಯಾರ್ಹವಾಗಿದೆ. ನಾವೆಲ್ಲ ಅಭಿಯಾನದ ಪಾದಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ ಎಂದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನ (ನವದೆಹಲಿ)ದ ಅಧ್ಯಕ್ಷ ಬಸವರಾಜ ಪಾಟೀಲ್ ಮಾತನಾಡಿ, ಜಾಗತಿಕ ಒಪ್ಪಂದಗಳಲ್ಲಿ ರೈತರ ಹಿತ ಕಡೆಗಣಿಸಲಾಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆ ವಿಪರೀತ ಅಸಮಾನತೆಯನ್ನು ಸೃಷ್ಟಿ ಮಾಡಿದೆ. ಒಂದು ಅಧ್ಯಯನದ ವರದಿ ಪ್ರಕಾರ ದೇಶದ 80ಕ್ಕೂ ಹೆಚ್ಚು ನದಿಗಳು ಕಲುಷಿತಗೊಂಡಿವೆ. ಈ ನದಿಗಳು ಕಲುಷಿತಗೊಳ್ಳಲು ಯಾರು ಕಾರಣ ಎನ್ನುವುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತುಂಗಭದ್ರಾ ನದಿ ಉಳಿವಿಗಾಗಿ ಈಗಾಗಲೇ 2 ಹಂತದ ಅಭಿಯಾನ ಮುಗಿದಿದ್ದು, ಮೂರನೇ ಹಂತದ ಅಭಿಯಾನ ಆರಂಭಿಸಲಾಗಿದೆ ಎಂದರು.
ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ರೈತರ ಬದುಕು ಹಸನಾಗುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ. ರೈತರ ಬೆಳೆಗಳಿಗೆ ಇಲ್ಲದ ನೀರು, 12 ತಿಂಗಳ ಕಾರ್ಖಾನೆಗಳಿಗೆ ನೀಡುತ್ತಿರುವುದು ಎಷ್ಟು ಸರಿ ? ತುಂಗಭದ್ರಾ ನೀರಿನ ಶುದ್ಧತೆ ಬಗ್ಗೆ ಅಭಿಯಾನ ನಡೆಯುತ್ತಿರುವುದು ಶ್ಲಾಘನೀಯವಾಗಿದ್ದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸಿಂಧನೂರು ತಾಲೂಕಿನ ಅಂಬಾಮಠಕ್ಕೆ ಕಾರಟಗಿಯಿಂದ ಡಿ.28ರಂದು ಜಾಗೃತಿ ಅಭಿಯಾನ ಪಾದಯಾತ್ರೆ ಆಗಮಿಸಲಿದ್ದು, ಡಿ.29 ಗೊರೇಬಾಳ, ಡಿ.30 ರಂದು ಸಿಂಧನೂರಿಗೆ ಆಗಮಿಸಲಿದ್ದು ಎಲ್ಲರೂ ಪಾಲ್ಗೊಳ್ಳುವ ಮೂಲಕ ಅಭಿಯಾನಕ್ಕೆ ಬಲ ತುಂಬಬೆಕು ಎಂದರು.
ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಪ್ರಮುಖರಾದ ಆರ್.ತಿಮ್ಮಯ್ಯ ನಾಯಕ, ಅಮೀನಪಾಷಾ ದಿದ್ದಗಿ, ಬಿ.ಹರ್ಷ, ಲಿಂಗರಾಜ ಪಾಟೀಲ್, ಅಶೋಕ ಉಮಲೂಟಿ ಇದ್ದರು.