ಡಿ.ಕೆ.ಶಿವುಕುಮಾರ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವದು. ಬಿಡುವದು ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು, ನಾವು ಸಂಸದರೊಂದಿಗೆ ದೆಹಲಿಗೆ ತೆರಳಿ ವಿಧಾನ ಪರಿಷತ್ ಸ್ಥಾನ ನೀಡುವಂತೆ ಮನವಿ ಮಾಡಲಾಗಿದೆಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡನೇ ಸುತ್ತಿನಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡಲಾಗುತ್ತಿದುದ ಸಾಕಷ್ಟು ಜನರು ಆಕಾಂಕ್ಷಿಗಳಾಗಿದ್ದಾರೆ. ಡಾ.ಶರಣಪ್ರಕಾಶ ಪಾಟೀಲ್ ಸೇರಿದಂತೆ ಕಳೆದ ಬಾರಿ ಬೇರೆ ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ನೀಡಲಾಗಿದೆ. ಬೇರೆಯವರು ಉಸ್ತುವಾರಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿಲ್ಲ. ಜಿಲ್ಲೆಯವರೇ ಸಚಿವರಾಗಬೇಕೆನ್ನವು ಬೇಡಿಕೆಯಿದೆ. ಪಕ್ಷ ವರಿಷ್ಟರು ಸಕಾಲದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಎಲ್ಲಾ ಸಮೂದಾಯಗಳಿಗೆ ನ್ಯಾಯ ಒದಗಿಸುವಸೇರಿ ಇತರೆ ಅಂಶಗಳನ್ನು ಪರಿಗಣಿಸಲಾಗುತ್ತದೆ.
ಮೂರು ವರ್ಷಗಳ ಸಚಿವ ಸ್ಥಾನದಿಂದ ತೃಪ್ತಿಯಿದ್ದು, ಕಳೆದ ಮೂರು ವರ್ಷ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಾಕಷ್ಟು ಅನುದಾನ ಜಿಲ್ಲೆಗೆ ಬಿಡುಡೆಯಾಗಿದ್ದು ಅಭಿವೃದ್ಧಿ ಪಥ ಮುಂದೆವರೆದಿದೆ. ಬಹುದಿನಗಳಿಂದ ಜನತೆ ನಿರೀಕ್ಷೆಯಂತೆ 25 ಕೋಟಿ ರೂ ವೆಚ್ಚದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಿ ಕಾರ್ಯಾರಂಭ ಮಾಡಲಾಗಿದೆ. ಅನೇಕ ಜಿಲ್ಲೆಗಳಲ್ಲಿಯೂ ಜಿಲ್ಲಾಡಳಿತ ಭವನ ನಗರದಿಂದ ದೂರವಾಗಿ ನಿರ್ಮಿಸಲಾಗಿದ್ದು, ಅಭಿವೃದ್ಧಿ ಹೊಂದುತ್ತಿರುವದರಿಂದ ಜಿಲ್ಲಾಡಳಿತ ಭವನ ದೂರವಾಗುವದಿಲ್ಲ ಎಂದು ಸಮರ್ಥಿಸಿಕೊಂಡರು.
ರಾಯಚೂರು ವಿಮಾನ ನಿಲ್ದಾಣಕ್ಕೆ ಇದ್ದ ತಾಂತ್ರಿಕ ಸಮಸ್ಯೆ ನೀಗಿಸಲಾಗಿದ್ದು 2 ತಿಂಗಳಲ್ಲಿ ಅನುಮೋದನೆ ದೊರಕಿಸಿ 264 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ನಿಗಧಿತ ಅವಧಿಗೆ ಮುಂಚಿತವಾಗಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ. ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿ ಮಹಾನಗರ ಪಾಲಿಕೆಯಾಗಿ ಘೋಷಿಸಿದೆ. ಮೊದಲ ಹಂತದಲ್ಲಿ 200ಕೋಟಿ ರೂ ಅನುದಾನ ಒದಗಿಸಲಾಗಿದೆ. 120 ಕೋಟಿ ರೂ ವೆಚ್ಚದಲ್ಲಿ ನೂತನ ತರಕಾರಿ ಮಾರುಕಟ್ಟೆ, ಸಂಸ್ಕರಣಘಟನ ಸೇರಿದಂತೆ ಸಂಕೀರ್ಣ ನಿರ್ಮಾಣ ಮಾಡಲು ಹುಡೋ ಸಾಲ ಪಡೆಯಲುಸರ್ಕಾರ ಮಟ್ಟದಲ್ಲಿಪ್ರಸ್ತಾವನೆಯಿದ್ದು ಶೀಘ್ರದಲ್ಲಿ ಅಂತಿಮ ರೂಪ ನೀಡಲಾಗುತ್ತಿದೆ ಎಂದರು. ಚಿಕಲಪರ್ವಿ ಸೇರಿದಂತೆ ಬ್ಯಾರೇಜ್ ಗಳ ನಿರ್ಮಾಣಕ್ಕೆ ಆಂಧ್ರ ಮತ್ತು ತೆಲಂಗಾಣದ ಸರ್ಕಾರಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸಕರಾತ್ಮಕ ಸ್ಪಂದನೆ ದೊರಕಿದ್ದು ಆಯಾ ರಾಜ್ಯಗಳ ಸಹಮತಿ ದೊರಕಿದ ನಂತರ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಆಲಮಟ್ಟಿ ಜಲಾಶಯದ ಎತ್ತರಕ್ಕೆ ಸರ್ಕಾರ ಬದ್ಧವಾಗಿದ್ದು ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ.
ಕೇಂದ್ರ ಅನುಮತಿ ನೀಡಲು ಸರ್ಕಾರ ಮೇಲೆ ಒತ್ತಡ ಹಾಕಲಾಗಿದೆ. ತುಂಗಭದ್ರ ಜಲಾಶಯದ ಕ್ರಸ್ಟಗೇಟ್ ಕಿತ್ತಿ ಹೋಗಿದ್ದರಿಂದ ಎದುರಾಗಿದ್ದ ಆತಂಕವನ್ನು ಸರ್ಕಾರ ದೂರ ಮಾಡಿದೆ. ಎಲ್ಲಾ ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿ ಪೂರ್ಣಗೊಳಿಸಲಾಗಿದ್ದು ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಸಮಸ್ಯೆ ನೀಗಿದಂತಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ನಡೆದಿವೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಪ್ರಮುಖರಾದ ಮಹ್ಮದ ಶಾಲಂ, ಜಯಣ್ಣ, ಕೆ.ಶಾಂತಪ್ಪ, ಜಯವಂತರಾವ್ ಪತಂಗೆ, ನರಸಿಂಹಲು ಮಾಡಗಿರಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಸಾಜೀದ ಸಮೀರ ಸೇರಿದಂತೆ ಅನೇಕರು ಇದ್ದರು.