ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ ಅವರು ದೆಹಲಿಗೆ ಹೋಗಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವದು ಬೇಕಿಲ್ಲ. ಪ್ರತಿಯೊಂದು ಪಕ್ಷದಲ್ಲಿಯೂ ಪಕ್ಷದ ಹೈಕಮಾಂಡ್ ಜತೆಗೆ ಪಕ್ಷದ ನಾಯಕರು ಭೇಟಿ ಮಾಡುತ್ತಾರೆಂದು ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಹೈಕಮಾಂಡ ಎಲ್ಲವನ್ನು ಗಮಿಸುತ್ತಿದೆ. ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಸದನದಲ್ಲಿಯೇ ಸಿಎಂ ಹೇಳಿಯಾಗಿದೆ ಎಂದಷ್ಟೇ ಹೇಳಿದರು. ಉಪಚುನಾವಣೆ ಬಳಿಕ ಸಚಿವ ಸ್ಥಾನ ಬದಲಾವಣೆಯಾಗುತ್ತದೆಂದು ಯಾರು ಹೇಳುತ್ತಾರೋ ಅವರನ್ನೇ ಕೇಳಬೇಕು. ಪಕ್ಷದಿಂದ ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ಕೈಬಿಡಲಾಗುತ್ತದೆ ಎಂದು ಕೆಲವರು ಹೇಳುತ್ತಿದ್ದು, ಪಕ್ಷದ ವರಿಷ್ಠರಿಗೆ ಎಲ್ಲಾ ಮಾಹಿತಿ ಇರುತ್ತದೆ. ಇದು ಆಂತರಿಕ ವಿಚಾರವಾಗಿದೆ. ಈ ಬಗ್ಗೆ ಮಾತನಾಡುವವರಿಗೆ ಆಂತರಿಕ ವಿಚಾರ ಏನು ಗೊತ್ತಿರುವುದಿಲ್ಲ ಬೇಕಾಬಿಟ್ಟಿ ಮಾತನಾಡುತ್ತಾರೆ ಎಂದರು.
ಸಂಪುಟ ಪುನರ್‌ರಚನೆಯಾದಾಗ ಪ್ರತಿಯೊಬ್ಬ ಶಾಸಕರಿಗೂ ಮಂತ್ರಿ ಸ್ಥಾನ ಸಿಗಬೇಕೆಂಬ ಆಕಾಂಕ್ಷೆ ಇರುತ್ತದೆ. ರಾಯಚೂರು ಜಿಲ್ಲೆಯ ಎಲ್ಲಾ ಶಾಸಕರೂ ಕೂಡ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ಆದರೆ ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಪ್ರಮುಖರಾದ ರವಿ ಬೋಸರಾಜು, ಕೆ.ಸಿ.ಅಯ್ಯಣ್ಣ, ಶಾಲಂ, ಸಾಜೀದ್ ಸಮೀರ, ಎಂ.ಈರಣ್ಣ ಇದ್ದರು.