ಇತ್ತೀಚೆಗೆ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗೆ ಜಾರಿ ಮಾಡಿದ ಒಳಮೀಸಲಾತಿಯಿಂದ ಮಾದಿಗ ಸಮಾಜಕ್ಕೆ ಮೋಸವಾಗಿದ್ದರು, ಕಾಂಗ್ರೆಸ್ ಬೆಂಬಲಿತ ಮಾದಿಗ ಸಮಾಜದ ಮುಖಂಡರು ಮೌನವಾಗಿದ್ದಾರೆಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳವರ್ಗೀಕರಣ ಹಾಗೂ ಕೆನೆಪದರ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪರಿಣಾಮಕಾರಿ ವಾದ ಮಂಡಿಸಿದ್ದು, ಅದರ ಫಲವಾಗಿ ದೇಶದಲ್ಲಿ ಒಳಮೀಸಲಾತಿಗೆ ದಾರಿ ತೆರೆದಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಸುಪ್ರೀಂ ಕೋರ್ಡ್ ಆದೇಶದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ಪಡೆಯಿತು. ಆದರೆ ಆ ವರದಿಯಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರಿಂದ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಇಳಿಸಲಾಯಿತು. ನಂತರ ರಾಜ್ಯ ಸರ್ಕಾರವು 2025ರ ಆ.25ರಂದು ಆದೇಶದಂತೆ ಪರಿಶಿಷ್ಟ ಜಾತಿಗಳಲ್ಲಿ ಪ್ರವರ್ಗ-ಎ ಗೆ ಶೇ.6, ಪ್ರವರ್ಗ-ಬಿಗೆ ಶೇ.6 ಹಾಗೂ ಪ್ರವರ್ಗ-ಸಿಗೆ ಶೇ.5ರಷ್ಟು ಮೀಸಲಾತಿ ನಿಗದಿ ಮಾಡಿತ್ತು. ಆದರೆ ಹೈಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರವು ಹಳೆಯ ರೋಸ್ಟ್ರ್ ಆಧಾರದಲ್ಲಿ ನೇಮಕಾತಿ ಹಾಗೂ ಶಿಕ್ಷಣ ಪ್ರವೇಶ ಪ್ರಕ್ರಿಯೆ ನಡೆಸುವುದಾಗಿ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿತ್ತು ಎಂದು ಹೇಳಿದರು.
ಮಾ.26ರಂದು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಯಾಗದಿದ್ದಾಗ ರಾಜ್ಯದ ಮಾದಿಗ ಸಮುದಾಯದಲ್ಲಿ ನಿರಾಸೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ತಮ್ಮನ್ನು ಭೇಟಿ ಮಾಡಿ ಒಳಮೀಸಲಾತಿ ಜಾರಿಗೆ ಹೋರಾಟ ನಡೆಸುವಂತೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದ ಪರಿಣಾಮವಾಗಿ ಏ.24ರಂದು ಸರ್ಕಾರವು ಪರಿಶಿಷ್ಟ ಜಾತಿ ಪ್ರವರ್ಗ-ಎಗೆ ಶೇ.5.25, ಪ್ರವರ್ಗ-ಬಿಗೆ ಶೇ.5.25 ಹಾಗೂ ಪ್ರವರ್ಗ-ಸಿಗೆ ಶೇ.4.5 ಒಳಮೀಸಲಾತಿ ಘೋಷಿಸಿತು ಎಂದು ವಿವರಿಸಿದರು.
ಈಗಲೂ ಮಾದಿಗ ಸಮುದಾಯಕ್ಕೆ ಮೋಸವಾಗಿದ್ದು, ಕಾಂಗ್ರೆಸ್ ಬೆಂಬಲಿತ ಕೆಲವು ಮಾದಿಗ ಸಂಘಟನೆಗಳು ಒಳಮೀಸಲಾತಿ ಹಂಚಿಕೆಯಲ್ಲಿ ಮಾದಿಗ ಸಮಾಜಕ್ಕೆ ಅನ್ಯಾಯವಾಗಿರುವುದು ತಿಳಿದಿದ್ದರೂ ಮೌನವಾಗಿವೆ. ಅವರಿಗೆ ಸಮಾಜಕ್ಕಿಂತ ಪಕ್ಷವೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹುಸೇನ್ ಬಾಷಾ, ಸುಧಾಕರ್ ಇದ್ದರು.