ಇರಕಲ್‌ನಲ್ಲಿ ವಿದ್ಯುತ್ ಪರಿವರ್ತಕ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಪಂ ಸದಸ್ಯ ಸೋಮಪ್ಪ, ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯಕ, ನಿರುಪಾದೆಪ್ಪ, ಹನುಮಂತ, ಮಲ್ಲಿಕಾರ್ಜುನ ಹಸ್ಮಕಲ್, ವಸಿಗೇರಪ್ಪ, ಈರಣ್ಣ, ಶ್ರೀದೇವಿ, ಆದಮ್ಮ, ದ್ಯಾವಮ್ಮ, ಶಿವಮ್ಮ, ಸರೋಜಮ್ಮ ಇತರರಿದ್ದರು.
ಕವಿತಾಳ: ಹೊಸ ಟಿಸಿ ಅಳವಡಿಸಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ವಟಗಲ್ ಗ್ರಾಪಂ ವ್ಯಾಪ್ತಿಯ ಇರಕಲ್‌ನಲ್ಲಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಮಂಗಳವಾರ ಸುರಿದ ಮಳೆ-ಗಾಳಿಗೆ ವಿದ್ಯುತ್ ಕಡಿತವಾಗಿತ್ತು. ಬುಧವಾರ ಜೆಸ್ಕಾಂ ಲೈನ್‌ಮನ್ ಬಂದು ಅವೈಜ್ಞಾನಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ವೋಲ್ಟೇಜ್ ಹೆಚ್ಚಾಗಿ ಕೆವರಲ ಮನೆಗಳಲ್ಲಿ ಟಿವಿಗಳು ಸುಟ್ಟಿವೆ. ಫ್ಯಾನ್-ಫ್ರಿಜ್‌ಗಳು ಕೂಡ ಹಾನಿಯಾಗಿವೆ.
ಶೆಡ್ಡಿನ ಮನೆ ಮೇಲೆ ವಿದ್ಯುತ್ ವೈರ್ ಬಿದ್ದಿದ್ದು, ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ತಕ್ಷಣ ವಿದ್ಯುತ್ ಕಡಿತಗೊಳಿಸಿ ಸಮರ್ಪಕವಾಗಿ ಪೂರೈಕೆ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಪರಿವರ್ತಕ ಸುಟ್ಟಿದೆ ಎಂದು ಹೇಳಿ ನಾಲ್ಕು ದಿನ ಕಳೆದರೂ ಕರೆಂಟ್ ಸಂಪರ್ಕ ನೀಡಿಲ್ಲ.
ಇದರಿಂದ ಕುಡಿವ ನೀರು ಸೇರಿ ಇತರ ಸಮಸ್ಯೆಗಳು ಎದುರಾಗಿ ಜನರು ಪರದಾಡುವಂತಾಗಿದೆ. ಆದ್ದರಿಂದ ಕೂಡಲೇ ಟಿಸಿ ದುರಸ್ತಿ ಇಲ್ಲವೆ ಹೊಸದಾಗಿ ಪರಿವರ್ತಕ ಅಳವಡಿಸಿ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಅಲ್ಲದ ಶಾಸಕಗೆ ಕರೆ ಮಾಡಿ ಸಮಸ್ಯೆ ತಿಳಿಸಿದರು. ಶಾಸಕರು, ಜೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.
ಈ ಕುರಿತು ಜೆಇ ವೆಂಕಟೇಶ ಮಾತನಾಡಿ, ಸೋಮವಾರದೊಳಗೆ ಇರಕಲ್‌ನಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಹೋರಾಟ ಕೈ ಬಿಡಲಾಯಿತು.