ಕಕ ಸಾಗುವಳಿ ರೈತರಿಗೆ ಪಟ್ಟಾ ನೀಡದೆ ಅನ್ಯಾಯ

ಲಿಂಗಸುಗೂರಿನಲ್ಲಿ ರಾಜ್ಯ ಸರ್ಕಾರದ ಸಾವಿರ ಸಮಸ್ಯೆಗಳು ಪೋಸ್ಟರನ್ನು ಶಾಸಕ ಮಾನಪ್ಪ ವಜ್ಜಲ್ ಬಿಡುಗಡೆ ಮಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಮುಖಂಡರಾದ ಅಯ್ಯಪ್ಪ ಮಾಳೂರು, ವೆಂಕನಗೌಡ ಐದನಾಳ, ಮುದುಕಪ್ಪ ನಾಯಕ, ಭೀಮಸೇನ ಕುಲಕರ್ಣಿ ಇದ್ದರು.
ಲಿಂಗಸುಗೂರಿನಲ್ಲಿ ರಾಜ್ಯ ಸರ್ಕಾರದ ಸಾವಿರ ಸಮಸ್ಯೆಗಳು ಪೋಸ್ಟರನ್ನು ಶಾಸಕ ಮಾನಪ್ಪ ವಜ್ಜಲ್ ಬಿಡುಗಡೆ ಮಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಮುಖಂಡರಾದ ಅಯ್ಯಪ್ಪ ಮಾಳೂರು, ವೆಂಕನಗೌಡ ಐದನಾಳ, ಮುದುಕಪ್ಪ ನಾಯಕ, ಭೀಮಸೇನ ಕುಲಕರ್ಣಿ ಇದ್ದರು.
Published on
ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ರೈತರು 30-40 ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿದ್ದರೂ ಸರ್ಕಾರ ಹಕ್ಕುಪತ್ರ ನೀಡದೆ ಸತಾಯಿಸುತ್ತಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಆರೋಪಿಸಿದರು. 
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ರಾಜ್ಯ ಸರ್ಕಾರದ ಸಾವಿರ ದಿನ-ಸಾವಿರ ಸಮಸ್ಯೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಪ್ರತಿ ತಾಲೂಕಿನಲ್ಲಿ ಸಾವಿರಾರು ರೈತರ ಅರ್ಜಿಗಳು ಬಾಕಿ ಉಳಿದಿದ್ದು, ತಿರಸ್ಕರಿಸುತ್ತ ಬರಲಾಗಿದೆ. ಕಂದಾಯ, ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಆತಂಕದಲ್ಲಿ ಬಡರೈತರು ದಿನದೂಡುತ್ತಿದ್ದಾರೆ. ಸಾಗುವಳಿ ಚೀಟಿಗಾಗಿ ಲಿಂಗಸುಗೂರು ತಾಲೂಕಿನಲ್ಲಿ 1200 ರೈತರಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೇವಲ 4 ಅರ್ಜಿಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ. ಸಾವಿರಾರು ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. 
ಇದರಿಂದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಗೊತ್ತಾಗುತ್ತದೆ. ಹಾವೇರಿಯಲ್ಲಿ ಸಾವಿರ ದಿನಗಳ ಸಾಧನಾ ಸಮಾವೇಶ ಮಾಡಿ ಹಕ್ಕುಪತ್ರ ನೀಡುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದೆ ಎಂದು ದೂರಿದರು. 
ರೈತರು ಉಳುಮೆ ಮಾಡಲು ಭೂಮಿ ಇಲ್ಲದೆ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ರಾಯಚೂರು ಜಿಲ್ಲೆಯೊಂದರಲ್ಲೇ ಪ್ರತಿವರ್ಷ 40 ರಿಂದ 50 ಸಾವಿರ ಜನರು ಬೆಂಗಳೂರು, ಗೋವಾ, ಬಾಂಬೆ ಮುಂತಾದ ಕಡೆ ಕೆಲಸ ಅರಸಿ ಹೋಗುತ್ತಾರೆ. ಈ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿ, ಕುಡಿಯಲು ನೀರಿಲ್ಲ. 
ಸಮರ್ಪಕ ನೀರಾವರಿ ಸೌಲಭ್ಯ, ಸಾರಿಗೆ ಬಸ್‌ಗಳಿಲ್ಲ. ಲಿಂಗಸುಗೂರು, ಹಟ್ಟಿ, ಮುದಗಲ್ ಪಟ್ಟಣಗಳಿಗೆ ಕುಡಿವ ನೀರು ಪೂರೈಸಲು ಸಾಧ್ಯವಾಗಿಲ್ಲ. ಪಕ್ಕದಲ್ಲೇ ನಾರಾಯಣಪುರ ಜಲಾಶಯ ಇದ್ದರೂ ನೀರು ಕೊಟ್ಟಿಲ್ಲ. ರಾಜ್ಯ ಸರ್ಕಾರ ಸಮಸ್ಯೆಗಳನ್ನು ಮರೆಮಾಚಲು ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಆರೋಪಿಸಿದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net