ಲಿಂಗಸುಗೂರು: ಸಿಬ್ಬಂದಿ ಕೊರತೆಯಿಂದ ಪಟ್ಟಣದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಎಡಿ ಕಚೇರಿಗೆ ಬೀಗ ಹಾಕಿದ್ದು, ಹೊಸ ಉದ್ಯಮ ಆರಂಭಿಸುವವರು ಹಾಗೂ ಉದ್ಯಮಿಗಳಿಗೆ ಸಮಸ್ಯೆಯಾಗಿದೆ.
ಪಟ್ಟಣದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಚೇರಿಯಲ್ಲಿ ಸಹಾಯಕ ನಿರ್ದೇಶಕ, ವಿಸ್ತೀರ್ಣಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕ ಮಧುಸೂದನ್ ಒಬ್ಬರೇ ಇದ್ದು, ಅವರೂ ಅ.24ರಿಂದ ರಜೆಯಲ್ಲಿದ್ದಾರೆ.
ಸದ್ಯ ರಾಯಚೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ ಎನ್ನುವವರಿಗೆ ಪ್ರಭಾರ ವಹಿಸಲಾಗಿದೆ. ಆದರೆ, ಅವರು ಕಚೇರಿಗೆ ಬಾರದ ಕಾರಣ ಅನಿವಾರ್ಯವಾಗಿ ಬೀಗ ಹಾಕಲಾಗಿದೆ.
ಕಚೇರಿ ಕೆಲಸಗಳಿಗಾಗಿ ಬಂದವರು ಬೀಗ ಹಾಕಿದ್ದು ನೋಡಿ ಹಿಂದಿರುಗುತ್ತಿದ್ದಾರೆ. ಯಾರೂ ಇಲ್ಲದ ಕಾರಣ ಕಚೇರಿ ಆವರಣ ದನಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಈ ಕುರಿತು ಜಿಲ್ಲಾ ಕಚೇರಿ ದೂರವಾಣಿಗೆ ಕರೆ ಮಾಡಿದರೂ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ರೈತ ಸಂಘದ ಮುಖಂಡರು ದೂರಿದ್ದಾರೆ.