ವೃತ್ತಿಪರ ಹಕ್ಕು-ರಕ್ಷಣೆಗೆ ಕ್ರಮವಹಿಸಲಿ

ಆಯುಷ್ ವೈದ್ಯಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಧರಣಿ
ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ರಾಯಚೂರಿನಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು. ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮೋಹನ್ ಬೆನಕದಾರ್, ಪ್ರಧಾನ ಕಾರ್ಯದರ್ಶಿ ಡಾ.ಆನಂದ ಎಸ್.ಕಿರಿಶಾಳ, ಪ್ರಮುಖರಾದ ಡಾ.ಶ್ರೀಕಾಂತ ಕೊಂಕಣಿ, ಡಾ.ಎಂ.ಎಸ್.ಅಮಿತ್, ಡಾ.ಆನಂದ ಕುಲಕರ್ಣಿ, ಡಾ.ಮಹಾವೀರ ಹಾವೇರಿ, ಡಾ.ಸಂದೀಪ್ ಇದ್ದರು.
Published on

ರಾಯಚೂರು: ಆಯುಷ್ ವೈದ್ಯರಿಗೆ ಆಧುನಿಕ ಔಷಧಗಳ ಬಳಕೆಗೆ ಅನುಮತಿ, ಗೆಜೆಟ್ ಅಧಿಸೂಚನೆಗಳಿಗೆ ಅನುಗುಣವಾಗಿ ವೃತ್ತಿಪರ ಹಕ್ಕುಗಳು ಮತ್ತು ಸೇವಾವಕಾಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ಆಯುಷ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.

ರಾಜ್ಯ ಘಟಕದ ಅಧ್ಯಕ್ಷ ಡಾ.ಮೋಹನ್ ಬೆನಕದಾರ್ ಮಾತನಾಡಿ, ಎನ್‌ಐಎಸ್‌ಎಂನಿಂದ ಮಾನ್ಯತೆ ಪಡೆದ ಪದವಿ ಕೋರ್ಸ್‌ಗಳು, ಪಠ್ಯಕ್ರಮ ಮತ್ತು ವೈದ್ಯಕೀಯ ವ್ಯಾಪ್ತಿಯ ಕುರಿತು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಮಗ್ರವಾಗಿ ಅರಿತುಕೊಳ್ಳಬೇಕು. ಆಯುಷ್ ವೈದ್ಯರ ವೃತ್ತಿಪರ ಹಕ್ಕುಗಳು ಮತ್ತು ರಕ್ಷಣೆಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಿಂದ ಪಡೆದಿರುವ ಆಯುಷ್ ವೈದ್ಯಕೀಯ ಪದವಿಯ ಪಠ್ಯಕ್ರಮ ಮತ್ತು ಅದರ ವ್ಯಾಪ್ತಿಯನ್ನು ಸಂಬಂಧಿಸಿದ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಆಯುಷ್ ವೈದ್ಯರಿಗೆ ಕಾನೂನುಬದ್ದ ಹಕ್ಕುಗಳಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಆನಂದ ಎಸ್.ಕಿರಿಶಾಳ ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ ವೈದ್ಯರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಆಯುಷ್ ವೈದ್ಯರಿಗೆ ಇಂತಹ ಸಮಸ್ಯೆಗಳು ಎದುರಾಗದಿದ್ದರೂ, ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಗುರಿಯಾಗಿಸಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಅಧಿಕೃತ ಮಾನ್ಯತೆ ಹೊಂದಿರುವ ಆಯುಷ್ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕೆಲವರು ಆರ್‌ಟಿಐ ಕಾರ್ಯಕರ್ತರು ಎಂದು ಪರಿಚಯಿಸಿಕೊಂಡು ವೈದ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಸರ್ಕಾರವೇ ಆರೋಗ್ಯ ಸೇವೆ ಒದಗಿಸುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಆಯುಷ್ ವೈದ್ಯರಿಗೆ ತೊಂದರೆ ನೀಡುವುದು ಸರಿಯಲ್ಲ. ಕೆಲ ವೈದ್ಯರ ವಿರುದ್ಧ ದಾಖಲಾಗಿರುವ ದೂರುಗಳು, ವಿಧಿಸಿರುವ ದಂಡ ಸೇರಿದಂತೆ ಎಲ್ಲ ಕ್ರಮಗಳನ್ನು ಪರಿಶೀಲಿಸಬೇಕು. ಕಾನೂನುಬದ್ದವಾಗಿಲ್ಲದ ಕ್ರಮಗಳು ಕಂಡುಬಂದಲ್ಲಿ ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕೆಪಿಎಂಇ ನೋಂದಣಿ ಮತ್ತು ನವೀಕರಣ, ಫೈರ್ ಎನ್‌ಒಸಿ ಸೇರಿದಂತೆ ಆಯುಷ್ ಕ್ಲಿನಿಕ್‌ಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಸಮಸ್ಯೆಗಳಿಗೆ ಸರಳ ಹಾಗೂ ಸ್ಪಷ್ಟ ನಿಯಮ ಜಾರಿಗೊಳಿಸಬೇಕು. ಆಯುಷ್ ವೈದ್ಯರಿಗೆ ಸಂಬಂಧಿಸಿದ ಹಾಗೂ ಕೆಪಿಎಂಇಗೆ ಸಂಬಂಧಿಸಿದ ಸಮಿತಿಗಳಲ್ಲಿ ಆಯುಷ್ ವೈದ್ಯರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ಡಾ.ರವೀಂದ್ರ, ಡಾ.ಎ.ಡಿ.ಹನೀಫ್, ಡಾ.ಸುನೀಲ್ ರಾಯ್, ಡಾ.ರಾಜೇಂದ್ರ, ಡಾ.ಎಚ್.ಸಿ.ಶಶಿಕಾಂತ್, ಆರ್.ಡಾ.ಸುನಿಲ್ ಹಿರೇಮಠ, ಡಾ.ಎಂ.ಬಿ.ಸಂತೋಷ, ಡಾ.ಶ್ರೀನಿವಾಸ ಕೆ.ಬನ್ನಿಗೋಳ, ಡಾ.ಸೋಮಶೇಖರ್ ಹುಡೇದ್, ಡಾ.ಜಿ.ಬಿ.ಕುಂಬಾರ, ಡಾ.ಪ್ರಕಾಶ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net