ದೇವದುರ್ಗ: ತಾಲೂಕು ಸೇರಿ ರಾಜ್ಯದ ವಿವಿಧ ಗ್ರಾಪಂಯಲ್ಲಿ ಕೆಲಸ ಮಾಡುವ ನೌಕರರ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿಯಲ್ಲಿ ಪಂಚಾಯತ್‌ರಾಜ್ ಇಲಾಖೆ ಎಡಿ ಶರಫುನ್ನೀಸಾ ಬೇಗಂಗೆ ರಾಜ್ಯ ಗ್ರಾಪಂ ನೌಕರರ ಸಂಘ (ಸಿಐಟಿಯು ಸಂಯೋಜಿತ) ಬುಧವಾರ ಮನವಿ ಸಲ್ಲಿಸಿತು.
ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ, ಕುಡಿವ ನೀರು, ವಿದ್ಯುತ್ ಸೌಲಭ್ಯ, ಆರೋಗ್ಯ ಜಾಗೃತಿ ಸೇರಿ ವಿವಿಧ ಕೆಲಸ ಮಾಡುವಲ್ಲಿ ಗ್ರಾಪಂ ನೌಕರರ ಶ್ರಮ ಹೆಚ್ಚಿದೆ. ಕಡಿಮೆ ವೇತನ ಹಾಗೂ ಸೌಲಭ್ಯಗಳ ಕೊರತೆ ನಡುವೆಯೂ ನೌಕರರು ಕೆಲಸ ಮಾಡುತ್ತಿದ್ದಾರೆ.
ನೀರಗಂಟಿ, ಕರವಸೂಲಿ, ಸ್ವಚ್ಚತೆ, ಕಸ ವಿಲೇವಾರಿ ವಾಹನ ಸವಾರರು ಸೇರಿ ನಾನಾ ವಿಭಾಗದಲ್ಲಿ ಹಲವು ವರ್ಷಗಳಿಂದ ನೌಕರರು ದುಡಿಯುತ್ತಿದ್ದಾರೆ. ಆದರೆ, ಸಿಬ್ಬಂದಿಗೆ ಸರ್ಕಾರ ಸೌಲಭ್ಯ ನೀಡದೆ ಅಸಮರ್ಪಕ ವೇತನ ನೀಡಿ ದುಡಿಸಿಕೊಳ್ಳುತ್ತಿದೆ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಕೂಡಲೇ ಎಲ್ಲ ಗ್ರಾಪಂ ನೌಕರರಿಗೆ ಪರಿಷ್ಕೃತ ವೇತನ ಜಾರಿ ಮಾಡಬೇಕು. ಜೀವವಿಮೆ, ಇಡುಗಂಟು ಸೇರಿ ವಿವಿಧ ಆರೋಗ್ಯ ಸೇವೆ ಯೋಜನೆಗೆ ಒಳಪಡಿಸಬೇಕು. ಪ್ರತಿ ತಿಂಗಳ ವೇತನ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು.
ಸುರಕ್ಷತೆ ಪರಿಕರಗಳು ಹಾಗೂ ಸೌಲಭ್ಯಗಳನ್ನು ಒದಗಿಸಬೇಕು. ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿ ಹೋರಾಟ ಬೆಂಬಲಿಸಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಶಿವಶರಣಪ್ಪ, ಪಾಂಡುರಂಗ ನಾಯಕ, ದೇವೇಂದ್ರ ಚವ್ಹಾಣ್, ಗಿರಿಯಪ್ಪ ಇತರರಿದ್ದರು.