ಮಟ್ಟೂರು ಗ್ರಾಮದಲ್ಲಿ ಸಚಿವ ಎನ್‌ಎಸ್‌ಬೋಸರಾಜುಗೆ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಪಾಮಯ್ಯ ಮುರಾರಿ, ಮಲ್ಲಕಾರ್ಜುನ ಪಾಟೀಲ್ ಇದ್ದರು.
ಮುದಗಲ್ : ಹನಿ ನೀರಾವರಿ ಬದಲಿಗೆ ಹರಿ ನೀರಾವರಿ ಪದ್ಧತಿ ಜಾರಿಗೊಳಿಸಬೇಕೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜುಗೆ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಭಾನುವಾರ ಮಟ್ಟೂರು ಗ್ರಾಮದಲ್ಲಿ ಮನವಿ ಸಲ್ಲಿಸಿತು.
ಹರಿ ನೀರಾವರಿ ಪದ್ಧತಿಯಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ಈಗಾಗಲೇ ಸಿಎಂ ಹಾಗೂ ಡಿಸಿಎಂ ಅವರಿಗೆ ಮನವಿ ಸಲ್ಲಿಸಿದ್ದು, ಸಚಿವ ಸಂಪುಟದಲ್ಲಿ ರೈತರ ಮನವಿಗೆ ಧ್ವನಿಗೂಡಿಸಬೇಕೆಂದು ಒತ್ತಾಯಿಸಿದರು.
ಪ್ರತಿ ರೈತರಿಗೆ ಪ್ರತ್ಯೇಕವಾಗಿ ನೀರಿನ ತೂಬು ಕೊಟ್ಟು ಭೂಮಿಗೆ ನೀರು ಒದಗಿಸುವುದು, ಕೃಷಿ ಭೂಮಿಗೆ ಅಗತ್ಯಕ್ಕೆ ತಕ್ಕಂತೆ ಕೃಷಿ ಹೊಂಡ ನಿರ್ಮಿಸಲು ರೈತರಿಗೆ ಹೊಣೆ ನೀಡಿ ಖರ್ಚನ್ನು ನಿಗಮದಿಂದ ಭರಿಸಬೇಕು. ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ನೀರು ನಿರ್ವಹಣೆಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ನಿಗಮದಿಂದ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಈಗಾಗಲೇ ನಂದವಾಡಗಿ ಏತ ನೀರಾವರಿ ಯೋಜನೆ ಕೊನೆಯ ಹಂತದಲ್ಲಿದ್ದು ಆದಷ್ಟು ಬೇಗ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಎಂ ಅವರೊಂದಿಗೆ ಚರ್ಚಿಸಿ ಪ್ರಯತ್ನಿಸಲಾಗುವುದು ಎಂದು ಸಚಿವ ಬೋಸರಾಜು ಭರವಸೆ ನೀಡಿದರು.