ಜಾತಿ-ಮತ ಭ್ರಾಂತಿಯಲ್ಲಿದ್ದವರಿಗೆ ಶಾಂತಿ ಸಿಗಲ್ಲ

ಲಿಂಗಸುಗೂರು ಸಮೀಪದ ದೇವರಭೂಪುರ ಮಠದಲ್ಲಿ ಏರ್ಪಡಿಸಿದ್ದ ಸದ್ಧರ್ಮ ಸಮಾರಂಭದಲ್ಲಿ ಜಗದ್ಗುರು ಪಂಚಾಚಾರ್ಯರು ಆಶೀರ್ವಚನ ನೀಡಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು, ಉಜ್ಜಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು, ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯರು, ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು, ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು, ದೇವರಭೂಪುರ ಗುರು ಗಜದಂಡ ಶ್ರೀಗಳು, ಎಮ್ಮಿಗನೂರಿನ ವಾಮದೇವ ಶ್ರೀಗಳು, ಬಿಚ್ಚಾಲಿಯ ವೀರಭದ್ರ ಶ್ರೀಗಳು ಇತರರಿದ್ದರು.
ಲಿಂಗಸುಗೂರು ಸಮೀಪದ ದೇವರಭೂಪುರ ಮಠದಲ್ಲಿ ಏರ್ಪಡಿಸಿದ್ದ ಸದ್ಧರ್ಮ ಸಮಾರಂಭದಲ್ಲಿ ಜಗದ್ಗುರು ಪಂಚಾಚಾರ್ಯರು ಆಶೀರ್ವಚನ ನೀಡಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು, ಉಜ್ಜಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು, ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯರು, ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು, ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು, ದೇವರಭೂಪುರ ಗುರು ಗಜದಂಡ ಶ್ರೀಗಳು, ಎಮ್ಮಿಗನೂರಿನ ವಾಮದೇವ ಶ್ರೀಗಳು, ಬಿಚ್ಚಾಲಿಯ ವೀರಭದ್ರ ಶ್ರೀಗಳು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಹೇಳಿಕೆ
  • ದೇವರಭೂಪುರಿನಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಸದ್ಧರ್ಮ ಸಮಾರಂಭ
ಲಿಂಗಸುಗೂರು: ವೀರಶೈವ ಧರ್ಮದ ಪಂಚಪೀಠಗಳನ್ನು ಜನರು, ಭಕ್ತರಿಂದ ದೂರ ಮಾಡಲು ಸಾಧ್ಯವಿಲ್ಲ. ಇದಕ್ಕೆ ದೇವರಭೂಪುರಿನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪಾಲ್ಗೊಂಡ ಭಕ್ತ ಸಮುದಾಯವೇ ಸಾಕ್ಷಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು. 
ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶಿವಾಚಾರ್ಯರ 21ನೇ ವರ್ಷದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಸದ್ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 
ಮಹಾತ್ಮರು ತೋರಿದ ಸನ್ಮಾರ್ಗದಲ್ಲಿ ಮನುಷ್ಯ ಸಾಗಿದರೆ ಜೀವನ ಉಜ್ವಲಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಸತ್ಯ ಮನುಷ್ಯನನ್ನು ಬದಲಿಸುತ್ತದೆ. ಮನಕ್ಕೆ ಶಾಂತಿ, ಆತ್ಮಕ್ಕೆ ಆನಂದ ಕೊಡುವುದೇ ನಿಜವಾದ ಧರ್ಮ. ಬದುಕು ಸುಖ ದುಃಖ, ನೋವು ನಲಿವು, ಮಾನ ಅಪಮಾನ, ಜಯ ಅಪಜಯ ಮೊದಲಾದ ದ್ವಂದ್ವಗಳಿಂದ ಕೂಡಿದೆ. ಅಂತರಂಗದ ಬೆಳಕಿಗಿಂತ ಬಹಿರಂಗದ ಬೆಳಕೇ ಹೆಚ್ಚೆಂದು ಮನುಷ್ಯ ತಿಳಿಯುತ್ತಾನೆ. 
ಹೊನ್ನು, ಹೆಣ್ಣು, ಮಣ್ಣಿಗಾಗಿ ಹೋರಾಡಿ ಸತ್ತವರು ಕೋಟಿ ಕೋಟಿ ಜನ. ಆದರೆ, ಭಗವಂತನಿಗಾಗಿ ಹಂಬಲಿಸಿ ಸತ್ತವರನ್ನು ಕಾಣಲಾಗದೆಂದು ಮಹಾತ್ಮರು ಎಚ್ಚರಿಸಿದ್ದಾರೆ. ಜಾತಿ, ಮತ ಭ್ರಾಂತಿಯಲ್ಲಿ ತೊಡಗಿದ ಮನುಷ್ಯನಿಗೆ ಶಾಂತಿ ಸಹಿಷ್ಣುತೆ ಇರಲಾರದು. ಮೌಲ್ಯಗಳ ಅಳಿವು ಉಳಿವು ಮಾನವನ ಆಚರಣೆಯಲ್ಲಿವೆ ಎಂದರು. 
ಉಜ್ಜಿನಿ ಸದ್ಧರ್ಮ ಮಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಮಹಾತ್ಮರಿಗೆ ಸತ್ಯ ಮತ್ತು ಧರ್ಮವೇ ಸಂಪತ್ತು. ಧರ್ಮ ಪರಿಪಾಲನೆಯೊಂದಿಗೆ ಮುನ್ನಡೆದು ನಾಡಿನ ಜನತೆಗೆ ಬೆಳಕಿನ ಸಂದೇಶ ಕರುಣಿಸಿದ್ದಾರೆ. ಭೌತಿಕ ಸಂಪತ್ತು ಸಂಗ್ರಹಿಸಿ ಬಡಿದಾಡಿ ಅಗಲಿದವರು ಬಹಳ ಜನ. ಅವರೆಲ್ಲ ಕಾಲಗರ್ಭದಲ್ಲಿ ಅಡಗಿ ಹೋದರು. 
ಜನತೆಗೆ ಬೆಳಕು ತೋರಿದ ಆಚಾರ್ಯರು, ಋಷಿಮುನಿಗಳು ಹೇಳಿದ ಮಾತುಗಳನ್ನು ಯಾರು ಮರೆಯಲಾಗದು. ದೇವರಭೂಪುರ ಬೃಹನ್ಮಠ ಉಜ್ಜಿನಿ ಪೀಠದ ಶಾಖಾ ಮಠವಾಗಿದೆ. ಈಗಿನ ಅಭಿನವ ಗಜದಂಡ ಶಿವಾಚಾರ್ಯರು ಮಠದ ಅಭಿವೃದ್ಧಿ ಮತ್ತು ಭಕ್ತರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಖುಷಿ ತಂದಿದೆ ಎಂದರು. 
ಕಾಶಿ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ನಾವು ಏನು ಪಡೆದಿದ್ದೇವೆ ಎನ್ನುವುದಕ್ಕಿಂತ ಹೇಗೆ ದುಡಿದಿದ್ದೇವೆ ಎಂಬುದು ಮುಖ್ಯ. ಏನು ನುಡಿದೆವು ಎನ್ನುವುದಕ್ಕಿಂತ ಹೇಗೆ ನಡೆದೆವು ಎಂಬುದು ಮುಖ್ಯ. ಏನು ಕೇಳಿ ಹೇಳಿದೆವು ಎಂಬುದಕ್ಕಿಂತ ಹೇಗೆ ಬಾಳಿದೆವು ಎಂಬುದು ಮುಖ್ಯ. 
ಹಸಿದು ಬಂದವರಿಗೆ ಅನ್ನ, ಬಾಯಾರಿದವರಿಗೆ ನೀರು, ಬಳಲಿ ಬಂದವರಿಗೆ ನೆರಳು ನೀಡಿದರೆ ಅದಕ್ಕಿಂತ ಮಿಗಿಲಾದ ಪುಣ್ಯ ಇನ್ನೊಂದಿಲ್ಲ. ವೀರಶೈವ ಧರ್ಮದ ಪರಮಾಚಾರ್ಯರು ಸುಖದ ನೆಮ್ಮದಿಯ ಬದುಕಿಗಾಗಿ ಬೋಧಿಸಿದ ನೀತಿ ಸಂಹಿತೆ ಅನುಸರಿಸಿ ಬಾಳಿದರೆ ಬದುಕು ಸಮೃದ್ಧಗೊಳ್ಳುತ್ತದೆ ಎಂದರು.
ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಜೀವನ ನಮಗೆ ಏನೆಲ್ಲಾ ಕೊಟ್ಟಿದೆ ಎಂದು ಸರಿಯಾಗಿ ತಿಳಿದರೆ ನಾವೆಷ್ಟು ಅದೃಷ್ಟವಂತರು ಎಂಬುದರ ಅರಿವಾಗುತ್ತದೆ ಎಂದರು. ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿದರು.
ದೇವರಭೂಪುರ ಗುರುಗಜದಂಡ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಶ್ರೀಗಳು, ಬಿಚ್ಚಾಲಿ ವೀರಭದ್ರ ಶ್ರೀಗಳು, ಜಾಲಹಳ್ಳಿ ಜಯ ಶಾಂತಲಿಂಗ ಶ್ರೀಗಳು, ಕೊಡೇಕಲ್ಲ ಶಿವಕುಮಾರ ಶ್ರೀಗಳು, ರಾಯಚೂರು ರಾಚೋಟಿ ಶ್ರೀಗಳು, ಕವಿತಾಳ ಕಲ್ಮಠದ ಸಿದ್ಧಲಿಂಗ ಶ್ರೀಗಳು, ನವಲಕಲ್ಲ ಸೋಮನಾಥ ಶ್ರೀಗಳು, ಕೂಡಲಗಿ ಪ್ರಶಾಂತಸಾಗರ ಶ್ರೀಗಳು, ಕೊಟ್ಟೂರು ಸಿದ್ಧಲಿಂಗ ಶ್ರೀಗಳು, ಗುರುಗುಂಟಾ ಸಂಸ್ಥಾನದ ರಾಜಾ ಸೋಮನಾಥ ನಾಯಕ, ಗುಂತಗೋಳ ಸಂಸ್ಥಾನದ ರಾಜಾ ಶ್ರೀನಿವಾಸ ನಾಯಕ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net