ಸರ್ಕಾರಿ ಶಾಲೆ ಮುಂದೆ ಅಕ್ರಮ ಅಂಗಡಿಗಳು

ಹಟ್ಟಿ ಕ್ಯಾಂಪ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂದೆ ನಿರ್ಮಾಣಗೊಂಡ ಅಂಗಡಿ ಮತ್ತು ಜಾಗ ಕಾಯ್ದಿರಿಸಲು ಹಾಕಿರುವ ಕಲ್ಲುಗಳು.
ಹಟ್ಟಿ ಕ್ಯಾಂಪ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂದೆ ನಿರ್ಮಾಣಗೊಂಡ ಅಂಗಡಿ ಮತ್ತು ಜಾಗ ಕಾಯ್ದಿರಿಸಲು ಹಾಕಿರುವ ಕಲ್ಲುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಕಲಿಕೆಗೆ ಪ್ರತಿಕೂಲ ಪರಿಣಾಮ
  • ಹಟ್ಟಿಚಿನ್ನದಗಣಿ ಅಂಗಡಿ ತೆರವಿಗೆ ಪಾಲಕರ ಒತ್ತಾಯ
ಹಟ್ಟಿಚಿನ್ನದಗಣಿ: ಹಟ್ಟಿ ಕ್ಯಾಂಪ್‌ನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಂದೆಯೇ ಅನಧಿಕೃತ ಅಂಗಡಿ-ಮುಂಗಟ್ಟುಗಳನ್ನು ಹಾಕಿಕೊಂಡಿದ್ದು, ವಿದ್ಯಾರ್ಥಿಗಳ ಕಲಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಹೌದು, ಶಾಲಾ ಕಾಂಪೌಂಡ್ ಮುಂದೆಯೇ ಗೂಡಂಗಡಿ, ಪಾನಿ ಪೂರಿ ಸ್ಟಾಲ್, ಎಗ್‌ರೈಸ್ ಅಂಗಡಿಗಳು ತಲೆಯೆತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆ, ಆರೋಗ್ಯ ಹಾಗೂ ಶೈಕ್ಷಣಿಕ ಶಿಸ್ತು ಸಂಪೂರ್ಣ ಹಾಳಾಗುತ್ತಿದ್ದರೂ ಸಂಬಂಧಪಟ್ಟ ಶಿಕ್ಷಕರು, ಅಧಿಕಾರಿಗಳು ಸುಮ್ಮನಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲಾ ಸಮಯದಲ್ಲೇ ವಿದ್ಯಾರ್ಥಿಗಳು ಈ ಅಂಗಡಿಗಳ ಬಳಿ ಗುಂಪುಗೂಡಿ ಸಮಯ ಕಳೆಯುವುದು, ಅಶುಚಿತ್ವ ಆಹಾರ ಸೇವಿಸುವುದು, ಹೊರಗಿನ ಅನಗತ್ಯ ವ್ಯಕ್ತಿಗಳ ಓಡಾಟ ಹೆಚ್ಚಾಗುವುದು ಸಾಮಾನ್ಯ ದೃಶ್ಯವಾಗಿದೆ. ಕೆಲ ಅಂಗಡಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಆಹಾರ ಮಾರಾಟ ನಡೆಯುತ್ತಿದ್ದು, ಮಕ್ಕಳ ಆರೋಗ್ಯದೊಂದಿಗೆ ಆಟ ಆಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಶಾಲಾವರಣದ ಬಳಿ ಅನಧಿಕೃತ ವ್ಯಾಪಾರ ನಿಷೇಧಿಸುವ ನಿಯಮಗಳಿದ್ದರೂ, ಅವು ಕೇವಲ ಕಾಗದದಲ್ಲೇ ಉಳಿದಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕುಳಿತಿರುವುದರಿಂದ ಕೆಲವರು ರಾಜಕೀಯ ಪ್ರಭಾವ ಮತ್ತು ಹಣದ ಬಲದಿಂದಲೇ ಈ ಅಂಗಡಿಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿವೆ.
ಕ್ರಮ ಕೈಗೊಳ್ಳಲು ಆಗ್ರಹ: ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಹಟ್ಟಿ ಚಿನ್ನದ ಗಣಿ ಆಡಳಿತ ತಕ್ಷಣ ಎಚ್ಚೆತ್ತುಕೊಂಡು ಶಾಲೆಗಳ ಪಕ್ಕದಲ್ಲಿ ತಲೆ ಎತ್ತಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು. ಜತೆಗೆ ಮಕ್ಕಳ ಭವಿಷ್ಯಕ್ಕಿಂತ ಅಕ್ರಮಗಳಿಗೆ ಮೌನ ಬೆಂಬಲ ನೀಡಿದವರ ವಿರುದ್ಧವೂ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
"

ಅಕ್ರಮ ಅಂಗಡಿಗಳನ್ನು ತೆರವು ಮಾಡಲು ಆಡಳಿತಾಧಿಕಾರಿಯಾದ ತಹಸೀಲ್ದಾರ್‌ಗೆ ಶಿಕ್ಷಣ ಇಲಾಖೆಯಿಂದ ಪತ್ರ ಬರೆದು ಕೋರಲಾಗುವುದು. ತಪ್ಪಿತಸ್ಥ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿ, ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲಾಗುವುದು.

— ಬಸವರಾಜ ಕರಡಿ ಶಿಕ್ಷಣ ಸಂಯೋಜಕ, ಲಿಂಗಸುಗೂರು


"

ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವುದೇ ಕಷ್ಟವಾಗಿದೆ. ಹೀಗಿರುವಾಗ ಶಿಕ್ಷಣ ಇಲಾಖೆ ಅಕ್ರಮ ಅಂಗಡಿಗಳನ್ನು ತೆರವು ಮಾಡುವ ಬದಲು ನಿರ್ಲಕ್ಷೃವಹಿಸಿರುವುದು ನಾಚಿಕೆಗೇಡಿನ ಸಂಗತಿ. ಅಕ್ರಮ ಅಂಗಡಿಗಳನ್ನು ತೆರವು ಮಾಡದಿದ್ದರೆ ವಿದ್ಯಾರ್ಥಿಗಳೊಂದಿಗೆ ಧರಣಿ ಮಾಡಲಾಗುವುದು. — ರಮೇಶ್ ಜೆ. ಅಧ್ಯಕ್ಷ, ಎಸ್‌ಎಫ್‌ಐ ಸಂಘ, ಹಟ್ಟಿ ಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net