ಬಾಕಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸುವೆ

ದೇವದುರ್ಗದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಯನ್ನು ಶಾಸಕಿ ಕರೆಮ್ಮ ನಾಯಕ ಉದ್ಘಾಟಿಸಿದರು.
ದೇವದುರ್ಗದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಯನ್ನು ಶಾಸಕಿ ಕರೆಮ್ಮ ನಾಯಕ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಕರೆಮ್ಮ ನಾಯಕ ಅಭಿಮತ
  • ದೇವದುರ್ಗದಲ್ಲಿ ಜನಸ್ಪಂದನಾ ಸಭೆ
ದೇವದುರ್ಗ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಿದ್ದು, ಪರಿಹಾರ ಕಲ್ಪಿಸಲು ಸೂಕ್ತ ವೇದಿಕೆಯಾಗಿದೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು. 
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಚುನಾವಣೆ ವೇಳೆ ನೀಡಿದ ಭರವಸೆಯಂತೆ ಎಲ್ಲ ವಾರ್ಡ್‌ಗಳಿಗೂ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದ್ದೇನೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಅನುದಾನ ತಂದು ಈಗಾಗಲೇ ಹಲವು ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜನರು ಯಾವುದೇ ಸಮಸ್ಯೆ ಇದ್ದರೂ ನನ್ನನ್ನು ಸಂಪರ್ಕಿಸಬಹುದು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲಾರೆ. ಪಕ್ಷಭೇದ ಮರೆತು ಎಲ್ಲ ವಾರ್ಡ್‌ಗಳಿಗೂ ಅನುದಾನ ನೀಡಲಾಗಿದೆ. ಬಾಕಿ ಇರುವ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸುವೆ ಎಂದರು. 
ಸ್ಥಳೀಯ ನಿವಾಸಿ ಗಂಗನಗೌಡ ಗೌರಂಪೇಟೆ ಮಾತನಾಡಿ, ಪಟ್ಟಣ ಧೂಳು ಮಾಯವಾಗಿದ್ದು ಎಲ್ಲೆಂದರಲ್ಲಿ ವಿಪರೀತ ಧೂಳು ಆವರಿಸಿದೆ. ಇದರಿಂದ ಜನರಿಗೆ ಕ್ಷಯ, ಅಸ್ತಮಾದಂತಹ ಶ್ವಾಸಕೋಶ ರೋಗಗಳು ಹರಡುತ್ತವೆ. ಈ ಕುರಿತು ಪುರಸಭೆ, ತಾಲೂಕು ಆಡಳಿತದ ಅಧಿಕಾರಿಗಳಿಗೆ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು. 
ಕೂಡಲೇ ಧೂಳು ನಿವಾರಣೆಗೆ ಪುರಸಭೆ ಕ್ರಮಕೈಗೊಳ್ಳಬೇಕು. ಎಲ್ಲ ವಾರ್ಡ್‌ಗಳಿಗೂ ಸಮರ್ಪಕವಾಗಿ ಕುಡಿವ ನೀರು ಪೂರೈಸಬೇಕು. ವಿವಿಧೆಡೆ ಸಿಸಿ-ಡಾಂಬರ್ ರಸ್ತೆ ಕಳಪೆಯಾಗಿ ಮಾಡುತ್ತಿದ್ದು ಗಮನ ಹರಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕಿ ಕರೆಮ್ಮ ನಾಯಕ ಮಾತನಾಡಿ, ಎಲ್ಲ ವಾರ್ಡ್‌ಗಳಿಗೂ ಕುಡಿವ ನೀರು ಸಮರ್ಪಕವಾಗಿ ಪೂರೈಸಬೇಕು. ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ಪೂರೈಕೆ ಮಾಡಬೇಕು. ಧೂಳು ನಿವಾರಣೆಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ರಸ್ತೆಗೆ ನೀರು ಸಿಂಪರಣೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಹಂಪಯ್ಯಗೆ ಸೂಚಿಸಿದರು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net