ಸಿಂಧನೂರು: ವಿದ್ಯಾರ್ಥಿಗಳು ಜಿನೀವಾ ಒಪ್ಪಂದದ ಆಶಯಗಳನ್ನು ಅರಿತುಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಸಮಾಜದ ಏಳಿಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪ್ರಾಚಾರ್ಯ ಡಾ.ಕೆ.ಖಾದರ್ ಬಾಷಾ ಹೇಳಿದರು.
ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ಕ್ರಾಸ್ ಘಟಕದಿಂದ ಆಯೋಜಿಸಿದ್ದ ಜಿನೀವಾ ಒಪ್ಪಂದ ದಿನ ಹಾಗೂ ವಾಚನಾಲಯ ವಿಭಾಗದಿಂದ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಗಾಯಗೊಂಡವರನ್ನು ರಕ್ಷಿಸುವುದು, ಪ್ರತಿಯೊಬ್ಬರಲ್ಲೂ ಮಾನವೀಯತೆ ಮತ್ತು ಸಹಾನುಭೂತಿಯ ಮನೋಭಾವ ಬೆಳೆಸುವುದು ಅಗತ್ಯವಾಗಿದೆ. ಕಾರ್ಯಕ್ರಮದ ಗುರಿ, ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಕಾರ್ಯಪ್ರವೃತ್ತರಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರೆಡ್ ಕ್ರಾಸ್ ಘಟಕದ ಸಂಯೋಜಕ ಹನುಮೇಶ, ಜಿನೀವಾ ಒಪ್ಪಂದದ ಹಿನ್ನೆಲೆ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಯುದ್ಧ ಮತ್ತು ಸಂಘರ್ಷದ ಸಂದರ್ಭದಲ್ಲಿ ಮಾನವೀಯತೆ ಕಾಪಾಡುವಲ್ಲಿ ಜಿನೀವಾ ಒಪ್ಪಂದದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಗ್ರಂಥಾಲಯ ದಿನದ ಅಂಗವಾಗಿ ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಂಥಪಾಲಕ ರಾಕೇಶ್, ಗ್ರಂಥಾಲಯದ ಉಪಯೋಗ ಮತ್ತು ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಸುನೀತಾ ಮತ್ತು ಸಂತೋಷ ದೇವರಮನಿಗೆ ಉತ್ತಮ ಓದುಗ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಾಧ್ಯಾಪಕ ಡಾ.ವೆಂಕಟರಮಣ, ಸಹಾಯಕ ಪ್ರಾಧ್ಯಾಪಕರಾದ ಡಾ.ದೇವಿದಾಸ್, ಮೌಲಾಸಾಬ್, ರಾಜೇಶ್ ಎನ್., ಗಂಗಾಬಾಯಿ, ಕಚೇರಿ ಅಧೀಕ್ಷಕ ಗೋಪಾಲಕೃಷ್ಣ, ಅತಿಥಿ ಉಪನ್ಯಾಸಕರಾದ ಮಹಾದೇವ, ನರಸಣ್ಣ, ಡಾ.ನಾಗರಾಜ, ರಾಕೇಶ, ಜಗದೀಶ್, ಶಿವಣ್ಣ, ತಿಮ್ಮಯ್ಯ, ಬಸವರಾಜ, ಹುಚ್ಚಪ್ಪ, ಹುಸೇನಸಾಬ್ ಇದ್ದರು.