ಆಸ್ಪತ್ರೆ ಆರಂಭ ವಿಳಂಬ

 1) ಲಿಂಗಸುಗೂರು ಸಮೀಪ ಕರಡಕಲ್ಲ ಹೊರವಲಯದಲ್ಲಿ ನಿರ್ಮಿಸಲಾದ ಸುಸಜ್ಜಿತ ತಾಯಿ-ಮಕ್ಕಳ ಆಸ್ಪತ್ರೆ. 2)ವೈದ್ಯರ ಹಾಗೂ ಸಿಬ್ಬಂದಿ ವಸತಿ ಗೃಹ ಕಟ್ಟಡ. 3) ಹೈಟೆಕ್ ಶಸ್ತ್ರಚಿಕಿತ್ಸಾ ಕೊಠಡಿ.
1) ಲಿಂಗಸುಗೂರು ಸಮೀಪ ಕರಡಕಲ್ಲ ಹೊರವಲಯದಲ್ಲಿ ನಿರ್ಮಿಸಲಾದ ಸುಸಜ್ಜಿತ ತಾಯಿ-ಮಕ್ಕಳ ಆಸ್ಪತ್ರೆ. 2)ವೈದ್ಯರ ಹಾಗೂ ಸಿಬ್ಬಂದಿ ವಸತಿ ಗೃಹ ಕಟ್ಟಡ. 3) ಹೈಟೆಕ್ ಶಸ್ತ್ರಚಿಕಿತ್ಸಾ ಕೊಠಡಿ.
Published on

ಪ್ರಮುಖ ಮುಖ್ಯಾಂಶಗಳು

  • ತಾಯಿ-ಮಕ್ಕಳ ದವಾಖಾನೆಗಿಲ್ಲ ಉದ್ಘಾಟನೆ ಭಾಗ್ಯ
  • ಲಿಂಗಸುಗೂರು ಕರಡಕಲ್ಲ ಕಲ್ಪಿಸಬೇಕಿದೆ ಅನುಕೂಲ
ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕರಡಕಲ್ಲ ಹೊರವಲಯದಲ್ಲಿ ನಿರ್ಮಿಸಿದ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಪೂರ್ಣಗೊಂಡು 6 ತಿಂಗಳು ಗತಿಸಿದರೂ ಉದ್ಘಾಟನೆಯಾಗದೆ ವಿಳಂಬವಾಗುತ್ತಿದೆ.
ಗರ್ಭಿಣಿಯರಿಗೆ, ಬಾಣಂತಿಯರಿಗೆ ಪ್ರಸವ ಪೂರ್ವ ಹಾಗೂ ನಂತರದ ಚಿಕಿತ್ಸೆ ನೀಡಲು ಅನುಕೂಲವಾಗಲೆಂದು 30 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣಗೊಂಡಿದೆ. 2023, ಮಾರ್ಚ್ 22ರಂದು ಭೂಮಿಪೂಜೆ ನೆರವೇರಿಸಿದ ನಂತರ 2026, ಜನವರಿ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಯಿತು. ಲಿಂಗಸುಗೂರು ತಾಲೂಕು ಸೇರಿದಂತೆ ಮಾನ್ವಿ, ದೇವದುರ್ಗ, ಪಕ್ಕದ ಮುದ್ದೇಬಿಹಾಳ, ಹುಣಸಗಿ, ಸುರಪುರ, ಶಹಪುರ ತಾಲೂಕುಗಳ ಜನರಿಗೆ ತಾಯಿ ಮಕ್ಕಳ ಆಸ್ಪತ್ರೆ ಅನುಕೂಲವಾಗಲಿದೆ.
ವೈದ್ಯರು-ಸಿಬ್ಬಂದಿ ನೇಮಕವಿಲ್ಲ: ಕಟ್ಟಡ ಪೂರ್ಣಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹಸ್ತಾಂತರಿಸಿಕೊಳ್ಳಲು ಕೇಳಿಕೊಂಡರೂ ಇನ್ನೂ ಆಗಿಲ್ಲ. ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಾಜಿಸ್ಟ್, ಶಸ್ತ್ರಚಿಕಿತ್ಸಾ ತಜ್ಞರು, 80ಕ್ಕೂ ಹೆಚ್ಚು ನರ್ಸ್‌ಗಳು, ಡಿ-ಗ್ರೂಪ್ ನೌಕರರ ನೇಮಕ ಮಾಡಿಲ್ಲ. ಅಲ್ಲದೆ, ಸಿಬ್ಬಂದಿ ನೇಮಕವಿಲ್ಲದೆ ಹಸ್ತಾಂತರ ಮಾಡಿಕೊಂಡರೆ ಕಿಟಕಿ, ಗಾಜು, ಬಾಗಿಲುಗಳಿಗೆ ಧಕ್ಕೆಯಾದರೆ ಹೊಣೆಗಾರರಾಗಬೇಕಾಗುತ್ತದೆ ಎಂಬ ಆತಂಕ ಅಧಿಕಾರಿಗಳದ್ದು ಎನ್ನಲಾಗುತ್ತಿದೆ.
ಸುಸಜ್ಜಿತ ಕೊಠಡಿಗಳು: ಹೈಟೆಕ್ ಆಸ್ಪತ್ರೆಯಲ್ಲಿ ಐಸಿಯು, ಆರೈಕೆ ಬೆಡ್‌ಗಳು, ಎಂಎನ್‌ಸಿಯು, ಬೆಡ್‌ಗಳ ಲಭ್ಯವಿಲ್ಲ. ಕೌನ್ಸ್‌ಲಿಂಗ್ ಕೊಠಡಿ, ಶಿಶುಗಳಿಗೆ ಹಾಲುಣಿಸುವ, ಕರ್ತವ್ಯನಿರತ ವೈದ್ಯರ, ಆಡಳಿತಾಧಿಕಾರಿಗಳ, ಔಷಧಿ ವಿತರಣಾ, ತಪಾಸಣಾ, ಲ್ಯಾಬ್, ಪ್ರಯೋಗಾಲಯ, ಪ್ರತ್ಯೇಕ ಶೌಚಗೃಹ, ಶುದ್ಧ ಕುಡಿಯುವ ನೀರಿನ ಘಟಕ, ಪೂರ್ಣಗೊಳಿಸಲಾಗಿದೆ. ವೈದ್ಯರ 4, ದಾದಿಯರ 6, ಗ್ರೂಪ್-ಡಿ ನೌಕರರ 4 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ವಸತಿ ಗೃಹಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದ್ದು, ಎರಡು ಅಂತಸ್ತಿನ ವಸತಿ ಗೃಹಗಳು ಸಿಬ್ಬಂದಿಗೆ ಅನುಕೂಲವಾಗಲಿವೆ.
ಅಗತ್ಯ ಉಪಕರಣಗಳಿಲ್ಲ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಉಪಕರಣ ಬಿಟ್ಟರೆ ಅಗತ್ಯ ಉಪಕರಣಗಳಿಲ್ಲ. ಸಿಟಿ ಸ್ಕಾೃನ್, ಎಂಆರ್‌ಐ, ಶಸ್ತ್ರಚಿಕಿತ್ಸಾ ಉಪಕರಣಗಳು, ಬೆಡ್‌ಗಳು ಇದುವರೆಗೂ ಪೂರೈಸಿಲ್ಲ. ಎರಡನೇ ಅಂತಸ್ತಿನ ಕಟ್ಟಡಕ್ಕೆ ಹೋಗಲು ಲಿಫ್ಟ್ ವ್ಯವಸ್ಥೆಯಿದ್ದು, ಆಪರೇಟರ್ ಇಲ್ಲ. ಕ್ಯಾಂಟೀನ್, ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಈಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 230ರಿಂದ 280 ಗರ್ಭಿಣಿ ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ವೈದ್ಯರ ಕೊರತೆಯಿಂದ ತೊಂದರೆಯಾಗಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲು ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಕಾರ್ಯಾರಂಭ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
"

ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಕುರಿತು ಆರೋಗ್ಯ ಸಚಿವ ಯು.ಟಿ.ಖಾದರ್ ಜತೆ ಮಾತನಾಡಿದ್ದೇನೆ. ಈಗಿನ್ನೂ ಸಚಿವನಾಗಿದ್ದೇನೆ ನಾಲ್ಕೈದು ದಿನಗಳ ನಂತರ ಆಸ್ಪತ್ರೆ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ. ಆದಷ್ಟು ಶೀಘ್ರ ಉದ್ಘಾಟನೆ ಮಾಡಲಾಗುವುದು.

— > ಮಾನಪ್ಪ ವಜ್ಜಲ ಶಾಸಕ, ಲಿಂಗಸುಗೂರು
"

ತಾಯಿ-ಮಕ್ಕಳ ಆಸ್ಪತ್ರೆಗೆ 60 ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸೂತಿ, ಮಕ್ಕಳ ತಜ್ಞರು, ರೇಡಿಯಾಲಜಿಸ್ಟರನ್ನು ತಾಯಿ-ಮಕ್ಕಳ ಆಸ್ಪತ್ರೆಗೆ ಕಳಿಸಲಾಗುವುದು. ಇನ್ನೂ ಹೆಚ್ಚಿನ ವೈದ್ಯರು ವರ್ಗಾವಣೆ ಮೂಲಕ ಬರುವವರಿದ್ದಾರೆ. ಶೇ.40 ರಷ್ಟು ಉಪಕರಣಗಳು ಬಂದಿದ್ದು ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು.

— > ಡಾ. ಸುರೇಂದ್ರ ಬಾಬು ಡಿಎಚ್‌ಒ ರಾಯಚೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net