

ರಾಯಚೂರು ರಂಗು ರಂಗಿನ ಹೋಳಿ ಹಬ್ಬವನ್ನು ನಗರ ಸೇರಿದಂತೆ ವಿವಿಧೆಡೆ ಮಂಗಳವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಬೆಳಗ್ಗೆಯಿಂದಲೇ ಯುವಕರು ವಿವಿಧ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿದ್ದರು. ದಾರಿ ಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ಹ್ಯಾಪಿ ಹೋಳಿ ಎನ್ನುತ್ತಾ ಸಂಭ್ರಮಿಸಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ಹೋಳಿ ಹುಣ್ಣಿಮೆಯಂದು ಶಾಲಾ,ಕಾಲೇಜುಗಳಿಗೆ ರಜೆ ನೀಡದಿದ್ದರು, ಹುಡುಗರಲ್ಲಿನ ಉತ್ಸಾಹ ಕಡಿಮೆಯಾಗಿಲ್ಲ. ಬಣ್ಣದಾಟಕ್ಕೆ ಈಗಾಗಲೇ ಮನೆ ಮನೆಗೆ ತೆರಳಿ ಬೊಬ್ಬೆ ಹಾಕಿ ದೇಣಿಗೆ ವಸೂಲಿ ಮಾಡಿ. ಬೀದಿಗಳಲ್ಲಿ ಸೌಂಡ್‌ಬಾಕ್ಸ್‌ಗಳನ್ನು ಅಳವಡಿಸಿ ಕುಣಿದು ಕುಪ್ಪಳಿಸಿದರು.
ಜತೆಗೆ ನಗರದ ನಾನಾ ಬಡಾವಣೆಗಳಲ್ಲಿ ಬೆಳಗ್ಗೆನೆ ಬಣ್ಣದ ಮಡಕೆ ಒಡೆಯುವ ಸ್ಪರ್ಧೆ ನಡೆಯಿತು. ಯುವಕರು ಮಡಕೆ ಒಡೆದು ಕುಣಿದು ಕುಪ್ಪಳಿಸಿದರು. ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿ ನೃತ್ಯ ಮಾಡಿ ಸಂತಸ ಪಟ್ಟರು. ನಂತರ ಮಧ್ಯಾಹ್ನ 12ರ ಹೊತ್ತಿಗೆ ಹೋಳಿ ಸಂಭ್ರಮಕ್ಕೆ ತೆರೆ ಬಿದ್ದಿತ್ತು.
ಚಿಣ್ಣರು ಹೋಳಿ -ದೊಡ್ಡವರು ಪಾರ್ಟಿ ಕಡೆಗೆ
ಪ್ರತಿ ವರ್ಷ ಹೋಳಿ ಎಂದರೆ ಪ್ರತಿಯೊಬ್ಬರು ಎರಡು ದಿನ ಹೋಳಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಸೂರ್ಯಗ್ರಹಣ ಇರುವುದರಿಂದ ನಗರದಲ್ಲಿ ಚಿಣ್ಣರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿನ ಹೋಳಿ ಆಚರಣೆ ಮಾಡಿರುವುದು ಕಂಡು ಬಂದಿತ್ತು. ಇದರ ಜತೆಗೆ ಮನೆಯ ದೊಡ್ಡವರು ಹೆಚ್ಚಿನ ಸಂಖ್ಯೆಯಲ್ಲಿ ಡಾಬಾಗಳಲ್ಲಿ ಪಾರ್ಟಿ ಮಾಡುವುದರ ಜತೆಗೆ ಬ್ಲಾಕ್‌ನಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ತೆಗೆದುಕೊಂಡು ಸೇವಿಸಿ ಅಮಲಿನಲ್ಲಿ ತೇಲಾಡಿದರು.