ಲಿಂಗಸುಗೂರು: ಸರ್ಕಾರ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ತಡೆ ಕಾಯ್ದೆ ಕಾನೂನು ಮತ್ತು ಸಂವಿಧಾನ ಬಾಹಿರವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಬಸವರಾಜ ಜಳಕಿಮಠ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರಜಾಪ್ರಭುತ್ವದ ತತ್ವ ಸಿದ್ಧಾಂತಗಳಿಗೆ ಇದು ಮಾರಕವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯ ಹೇಳುವುದನ್ನು ಕೂಡ ದ್ವೇಷ ಎಂದು ಪರಿಗಣಿಸುವುದು ಅಪಾಯಕಾರಿ.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರದನಿ ಅಡಗಿಸುವ ಹುನ್ನಾರವಾಗಿದ್ದು, ಜಾರಿಗೊಳಿಸಬಾರದು. ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೆ.ನಾಗಭೂಷಣ, ಹುಲ್ಲೇಶ ಸಾಹುಕಾರ ಮುದಗಲ್, ಮುಖಂಡರಾದ ಗಿರಿಮಲ್ಲನಗೌಡ, ವೆಂಕನಗೌಡ, ಅಯ್ಯಪ್ಪ ಮಾಳೂರು, ಪರಶುರಾಮ, ಚನ್ನಬಸವ ಹಿರೇಮಠ, ಸಿದ್ದು ಬಡಿಗೇರ್, ಶಂಕ್ರಪ್ಪ ಇದ್ದರು.