ಅರಳಹಳ್ಳಿಯಲ್ಲಿ ಶ್ರೀ ರಾಮಲಿಂಗೇಶ್ವರ ಜಾತ್ರೋತ್ಸವ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ 75ನೇ ವರ್ಷದ ಪುರಾಣ ಮಹಾಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿದರು. ಸೋಮನಾಥ ಶಿವಾಚಾರ್ಯರು, ಕೃಷ್ಣಾನಂದ ಶರಣರು, ಅಮರೇಗೌಡ ವಿರೂಪಾಪುರ, ನಲ್ಲಾ ವೆಂಕಟೇಶ್ವರರಾವ್, ಪಂಪಾಪತಿಸ್ವಾಮಿ ಇದ್ದರು.
ಸಿಂಧನೂರು: ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಉತ್ಸವಗಳು ಹೆಚ್ಚು ನಡೆಯುವುದರಿಂದ ಜನರು ಸಾಮರಸ್ಯದಿಂದ ಬದುಕುತ್ತಾರೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ರಾಮಲಿಂಗೇಶ್ವರ ಜಾತ್ರೋತ್ಸವ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ 75ನೇ ವರ್ಷದ ಪುರಾಣ ಮಹಾಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹ ಉತ್ತಮ ಕಾರ್ಯ. ಇಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಕುಟುಂಬಕ್ಕೆ ಆರ್ಥಿಕ ಭಾರ ಕಡಿಮೆಯಾಗಲಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಮೂರುಮೈಲ್‌ಕ್ಯಾಂಪ್ ಕರಿಬಸವನಗರದ ರಂಭಾಪುರಿ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯರು ಮಾತನಾಡಿ, ಮದುವೆಗೆ ದುಂದುವೆಚ್ಚ ಮಾಡಿ ಸಾಲಗಾರರಾಗದೆ ಇಂಥ ಕಾರ್ಯಕ್ರಮಮಗಳಲ್ಲಿ ವಿವಾಹವಾದರೆ ಸಾವಿರಾರು ಜನರ ಆಶೀರ್ವಾದ ನಿಮಗೆ ದೊರುಕುತ್ತದೆ ಎಂದರು.
ಬಾಗಲಕೋಟೆಯ ಖಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶರಣರು ಮಾತನಾಡಿ, ಅರಳಹಳ್ಳಿಯಂಥ ಸಣ್ಣ ಗ್ರಾಮದಲ್ಲಿ 75 ವರ್ಷಗಳಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಪುರಾಣ ನಡೆಸಿಕೊಂಡು ಬಂದಿರುವುದು ಸಾಮಾನ್ಯದ ವಿಷಯವಲ್ಲ. ಆ ತಾಯಿಯ ಆಶೀರ್ವಾದ ಮತ್ತು ರಾಮಲಿಂಗೇಶ್ವರನ ಕೃಪೆಯಿಂದ ಊರಿಗೆ ಸುಭೀಕ್ಷೆ ದೊರಕಿದೆ ಎಂದರು.
ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ ಮಾತನಾಡಿದರು. ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್, ಪ್ರಮುಖರಾದ ಪಂಪಾಪತಿಸ್ವಾಮಿ ಹಿರೇಮಠ, ಪರ್ವತರಡ್ಡಿ ಹತ್ತಿಗುಡ್ಡ, ರವಿ ಮಲ್ಲದಗುಡ್ಡ ಇದ್ದರು.
ಬೆಳಗ್ಗೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಉಚ್ಚಾಯಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ಮಹಿಳೆಯರು ಉಚ್ಚಾಯ ಎಳೆದರು. ಸಂಜೆ ಶ್ರೀ ರಾಮಲಿಂಗಶ್ವರ ರಥೋತ್ಸವಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು. ಕರಿಯಪ್ಪತಾತ ನವತರುಣ ಸಂಘದಿಂದ ಶ್ರೀ ದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ನಡೆಯಿತು.