ವಹಿಸಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿ

ಲಿಂಗಸುಗೂರು ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಗುರುಗುಂಟಾ ಶ್ರೀ ಅಮರೇಶ್ವರ ಜಾತ್ರೆ ಪೂರ್ವಭಾವಿ ಸಭೆ ನಡೆಯಿತು. ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಾಪಂ ಇಒ ಉಮೇಶ, ಪೊಲೀಸ್ ಇನ್ಸ್‌ಪೆಕ್ಟರ್ ಹೊಸಕೇರಪ್ಪ, ಅಬಕಾರಿ ಅಧಿಕಾರಿ ಲಕ್ಷ್ಮೀದೇವಿ, ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ, ದೇವಸ್ಥಾನ ಅಧಿಕಾರಿ ಹನುಮೇಶ ಇದ್ದರು.
ಲಿಂಗಸುಗೂರು ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಗುರುಗುಂಟಾ ಶ್ರೀ ಅಮರೇಶ್ವರ ಜಾತ್ರೆ ಪೂರ್ವಭಾವಿ ಸಭೆ ನಡೆಯಿತು. ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಾಪಂ ಇಒ ಉಮೇಶ, ಪೊಲೀಸ್ ಇನ್ಸ್‌ಪೆಕ್ಟರ್ ಹೊಸಕೇರಪ್ಪ, ಅಬಕಾರಿ ಅಧಿಕಾರಿ ಲಕ್ಷ್ಮೀದೇವಿ, ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ, ದೇವಸ್ಥಾನ ಅಧಿಕಾರಿ ಹನುಮೇಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಎಸಿ ಬಸವಣೆಪ್ಪ ಕಲಶೆಟ್ಟಿ ಸೂಚನೆ
  • ಲಿಂಗಸುಗೂರಿನಲ್ಲಿ ಗುರುಗುಂಟಾ ಜಾತ್ರೆ ಪೂರ್ವಭಾವಿ ಸಭೆ
ಲಿಂಗಸುಗೂರು: ಐತಿಹಾಸಿಕ ಪ್ರಸಿದ್ಧ ಗುರುಗುಂಟಾದಲ್ಲಿ ಮಾ.3ರಂದು ನಡೆಯಲಿರುವ ಶ್ರೀ ಅಮರೇಶ್ವರ ಜಾತ್ರೋತ್ಸವ ಯಶಸ್ಸಿಗೆ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಸೂಚಿಸಿದರು. 
ಪಟ್ಟಣದ ಎಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಥ ಬೀದಿ ಸಮತಟ್ಟು ಮಾಡಿ ನೀರು ಸಿಂಪಡಿಸಬೇಕು. ರಥದ ಗಾಲಿಗಳನ್ನು ಪರೀಕ್ಷಿಸಬೇಕು ಎಂದು ಪಿಡಬ್ಲುೃಡಿ ಅಧಿಕಾರಿ ಭಾಗ್ಯಶ್ರೀ ಅವರಿಗೆ ಸೂಚಿಸಿದರು. 
ದೇವಸ್ಥಾನದಲ್ಲಿರುವ ಶುದ್ಧ ಕುಡಿವ ನೀರಿನ ಘಟಕ ದುರಸ್ತಿಗೊಳಿಸಬೇಕು. ಯಾವುದೇ ಕಾರಣಕ್ಕೂ ಕುಡಿವ ನೀರಿನ ಸಮಸ್ಯೆ ಆಗಬಾರದು. ಮೂರು ದಿನಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಲಿರುವ ಬಜಾರ ಬಾವಿ, ಬೋರ್‌ವೆಲ್, ನಾರಾಯಣಪುರ ಬಲದಂಡೆ ಕಾಲುವೆ ನೀರನ್ನು ಬಳಸಿಕೊಳ್ಳಲು ಕ್ರಮ ವಹಿಸಬೇಕೆಂದು ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪರಮೇಶ್ವರ ಟೆಂಗಳಿಕರ, ದೇವರಭೂಪೂರ ಗ್ರಾಪಂ ಪಿಡಿಒ ಬಸವರಾಜ ವಸ್ತ್ರದಗೆ ಎಸಿ ತಿಳಿಸಿದರು. 
ಹೊಸ ಮಹಿಳಾ ಶೌಚಗೃಹ ಹಾಗೂ ವಿವಿಧ ಶೌಚಗೃಹಗಳ ಸರಿಪಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು. ದೇವಸ್ಥಾನ ವಿವಿಧ ಕೊಠಡಿಗಳಿಗೆ ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಬೇಕು. ದೇವಸ್ಥಾನದ ಮುಂಭಾಗದಲ್ಲಿ ಮಿಠಾಯಿ, ಸ್ಟೇಷನರಿ, ಬಳೆ, ಬಾಂಡೆ, ಹೋಟೆಲ್ ವಿವಿಧ ಅಂಗಡಿಗಳನ್ನು ಹಾಕಲು ಸರ್ವೇಯರ್ ಮೂಲಕ ಅಳತೆ ಮಾಡಿಸಿ ಹರಾಜು ಮೂಲಕ ಒದಗಿಸಬೇಕು ಎಂದು ದೇವಸ್ಥಾನದ ಅಧಿಕಾರಿ ಹನುಮೇಶಗೆ ಸೂಚಿಸಿದರು. 
ಜಾತ್ರೆಗೆ ಬರುವ ಭಕ್ತರಿಗಾಗಿ ವಿಶೇಷ ಬಸ್‌ಗಳನ್ನು ಬಿಡಬೇಕು. ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಅನುಕೂಲ ಮಾಡಬೇಕೆಂದು ಸಾರಿಗೆ ಘಟಕದ ಅಧಿಕಾರಿ ಮಹಾರುದ್ರಪ್ಪಗೆ ಎಸಿ ಸೂಚನೆ ನೀಡಿದರು.  ದನಗಳ ಜಾತ್ರೆಯೂ ನಡೆಯಲಿದ್ದು, ಕುಡಿವ ನೀರು, ಬೆಳಕು ಸೇರಿ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಅವರಿಗೆ ತಿಳಿಸಿದರು.
ಪಿಐ ಹೊಸಕೇರಪ್ಪ ಮಾತನಾಡಿ, ಜಾತ್ರೆಯಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು. ಸಿಸಿ ಕ್ಯಾಮರಾ, ವಾಚ್ ಟವರ್‌ಗಳನ್ನು ಅಳವಡಿಸಿ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ನಿರಂತರ ವಿದ್ಯುತ್ ಪೂರೈಸಿ

ಬಾವಿ, ಬೋರ್‌ವೆಲ್ ಟ್ಯಾಂಕ್, ವಿವಿಧ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ತಾತ್ಕಾಲಿಕ ಆಸ್ಪತ್ರೆ ತೆರೆದು ಔಷಧಗಳನ್ನು ಸಂಗ್ರಹಿಸಿ ಭಕ್ತರ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ಟಿಎಚ್‌ಒ ಅಮರೇಶ ಪಾಟೀಲ್‌ಗೆ ಎಸಿ ತಿಳಿಸಿದರು. ಜಾತ್ರೆ ಮುಗಿಯುವವರೆಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಬೀದಿ ದೀಪಗಳನ್ನು ಪರಿಶೀಲಿಸಿ, ಕೆಟ್ಟಿದ್ದರೆ ಸರಿಪಡಿಸಬೇಕು.ಯಾವುದೇ ಅವಘಡ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಅಗ್ನಿಶಾಮಕ ವಾಹನಗಳ ನಿಲುಗಡೆ ಮಾಡಬೇಕು. ದೇವಸ್ಥಾನ ಸುತ್ತ ಮದ್ಯ ಅಕ್ರಮ ಮಾರಾಟ ತಡೆಯಬೇಕು. ಈ ಬಗ್ಗೆ ಸೂಕ್ತ ನಿಗಾವಹಿಸಬೇಕೆಂದು ಸಂಬಂಧಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net