ಕೈಕೊಟ್ಟ ಮುಂಗಾರು ಸಾಲ ತೀರಿಸಲು ಗುಳೆ!

ಲಸ ಅರಸಿ ಬೇರೆ ಬೆಂಗಳೂರು ಸೇರಿದಂತೆ ಬೇರೆ ರಾಜ್ಯ ಕಡೆ ತಂಡೋಪತಂಡವಾಗಿ ಗುಳೆ ಹೊಂಟಿದ್ದಾರೆ.
ಲಸ ಅರಸಿ ಬೇರೆ ಬೆಂಗಳೂರು ಸೇರಿದಂತೆ ಬೇರೆ ರಾಜ್ಯ ಕಡೆ ತಂಡೋಪತಂಡವಾಗಿ ಗುಳೆ ಹೊಂಟಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಡ ಮಕ್ಕಳ ಶಿಕ್ಷಣಕ್ಕೆ ಕುತ್ತು!
  • ನಿತ್ಯ ಬೆಂಗಳೂರಿಗೆ 58 ಬಸ್ ಪ್ರಯಾಣ
  • ಗ್ಯಾರಂಟಿಗೆ ಕಿಮ್ಮತ್ತಿಲ್ಲ
ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟು ಜಿಲ್ಲೆಯಲ್ಲಿ ಬರಗಾಲ ಛಾಯೆ ಆವರಿಸಿದ್ದು, ಅನ್ನದಾತ ತೀವ್ರ ಸಂಕಷ್ಟದಲ್ಲಿದ್ದಾನೆ. ಈಗಾಗಿ ಕಡಿಮೆ ಕೃಷಿ ಭೂಮಿ ಹೊಂದಿದ ಹಾಗೂ ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗೆ ಸಹ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅದೆಷ್ಟೋ ಜನ ಕೆಲಸ ಅರಸಿ ಬೇರೆ ಬೆಂಗಳೂರು ಸೇರಿದಂತೆ ಬೇರೆ ರಾಜ್ಯ ಕಡೆ ತಂಡೋಪತಂಡವಾಗಿ ಗುಳೆ ಹೊಂಟಿದ್ದಾರೆ.
ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ತೀವ್ರ ಬರಗಾಲ ಆವರಿಸಿದ್ದು ಇದರಿಂದಾಗಿ ಜಮೀನು ಇದ್ದ ರೈತರೇ ಕೆಲಸವಿಲ್ಲದೇ ಖಾಲಿ ಇರುವಾಗ ಕೃಷಿ ಕಾಯಕವನ್ನೇ ನಂಬಿಕೊಂಡಿದ್ದ ಜಮೀನು ಇಲ್ಲದ ಅದೆಷ್ಟೋ ಬಡ ಕೃಷಿ ಕಾರ್ಮಿಕರು ಕೆಲಸ ಅರಸಿ ಬೆಂಗಳೂರು , ಗುಂಟೂರು , ಸೊಲ್ಲಾಪುರ, ಗೋವಾ , ಮಂಗಳೂರು, ಪುಣೆ ಸೇರಿ ವಿವಿಧೆಡೆ ಗುಳೆ ಹೋಗುತ್ತಿದ್ದಾರೆ. ಕುಟುಂಬ ಸಮೇತ ಗುಳೆ ಹೋಗುತ್ತಿರುವುದರಿಂದ ಗ್ರಾಮಗಳು ಅಕ್ಷರಶಃ ಖಾಲಿ ಖಾಲಿ ಎನ್ನುವಂತಾಗಿವೆ.
ಗಂಟು ಮೂಟೆ ಕಟ್ಟುಕೊಂಡು ಸಣ್ಣ ಮಕ್ಕಳೊಂದಿಗೆ ಬೆಂಗಳೂರಿಗೆ ಹೊರಡಲು ಸಿದ್ಧವಾಗಿ ಬೆಂಗಳೂರಿನ ಬಸ್‌ಗಾಗಿ ಕಾಯುತ್ತಿರುವ ಕುಟುಂಬವೊಂದನ್ನು ಮಾತಾಡಿಸಿದಾಗ ಕುಟುಂಬದ ಹಿರಿಯರನ್ನು ಮಾತಾಡಿಸಿದಾಗ ಏನ್ ಮಾಡೋದಪ್ಪ ನಮ್ಮ ಕಡೆ ಈ ಬಾರಿ ಮಳೆ ಇಲ್ಲ. ಬೆಳೆಗಾಗಿ ಮಾಡಿದ ಸಾಲ ತೀರಿಸಲು ಮನೆಮಂದಿಯಲ್ಲ ಬೆಂಗಳೂರಿಗೆ ಹೊಂಟೀವಿ, ಸಣ್ಣ ಮಕ್ಳು ಸಾಲಿ ಅದಾವ ಆದ್ರು ಬದುಕಿನ ಬಂಡಿ ಸಾಗಬೇಕಲ್ಲಪ್ಪ ಹಂಗಾಗಿ ಬೆಂಗಳೂರಿಗೆ ಹೊಂಟೀವಿ ಮಳೆ ಬಂದ್ರೆ ಊರ್ ಕಡೆ ಬರೋದು ಇಲ್ಲಾಂದ್ರ ಅಲ್ಲೇ ಸಿಕ್ಕ ಕೆಲಸ ಮಾಡೋದು , ಸರ್ಕಾರದ ಖಾತ್ರಿ ಕೆಲಸ ಎಷ್ಟು ದಿವಸ ಕೊಡತಾರ ಹಂಗಾಗಿ ನಮ್ಮ ರೆಟ್ಟಿಯೊಳಗೆ ಶಕ್ತಿ ಇರೋತನ ದುಡಿತೀವಿವೆಂದು ನೋವು ಹಂಚಿಕೊಂಡಳು.
ಗ್ಯಾರಂಟಿಗೆ ಕಿಮ್ಮತ್ತಿಲ್ಲ :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಜಾರಿ ಮಾಡಿದೆ. ಆದರೂ ಜಿಲ್ಲೆಯ ಜನರು ಗುಳೆ ಹೋಗುತ್ತಿದ್ದಾರೆ. ರೈತರು, ಬಡವರು ಕೂಲಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಸಣ್ಣ ಪ್ರಮಾಣದಲ್ಲಿ ನೆರವು ನೀಡುವಲ್ಲಿ ಸರ್ಕಾರದ ಈ ಗ್ಯಾರಂಟಿ ಯೋಜನೆಗಳು ಸ್ವಲ್ಪ ಪ್ರಮಾಣದಲ್ಲಿ ಆಸರೆಯಾದಂತೆ ಕಂಡು ಬಂದರೂ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ಮಹಾನಗರದಲ್ಲಿ ನಿತ್ಯ 1000 ರೂ.ಕೂಲಿ
ಉದ್ಯೋಗ ಖಾತ್ರಿಯಲ್ಲಿ ದಿನಕ್ಕೆ 306 ರು. ಕೂಲಿ ಸಿಗುತ್ತೆ, ಕೇರಳ, ಬೆಂಗಳೂರು, ಪುಣೆಯಂತ ಮಹಾನಗರಗಳಲ್ಲಿ ದಿನಕ್ಕೆ ಕನಿಷ್ಠ 800ರಿಂದ 1000 ರೂ.ವರೆಗೆ ಕೂಲಿ ಸಿಗುತ್ತೆ, ಅಲ್ಲದೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟವನ್ನೂ ಕೊಡುತ್ತಾರೆ. ರಾತ್ರಿ ಊಟ ಮಾತ್ರ ನಮ್ಮ ಖರ್ಚು. ಇದರಿಂದ ಅಧಿಕ ಕೂಲಿಯೂ ಲಭಿಸಿ, ಉಳಿತಾಯವೂ ಆಗುತ್ತದೆ. ಎನ್ನುತ್ತಾರೆ ಬೆಂಗಳೂರಿಗೆ ಗುಳೆ ಹೊರಟ ಜನರು.
ಶಿಕ್ಷಣದಿಂದ ವಂಚಿತರಾಗುವ ಭೀತಿ
ಕುಟುಂಬದವರ ಜತೆ ಮಕ್ಕಳು ವಲಸೆ ಹೋಗುತ್ತಿರುವುದರಿಂದ ಶಿಕ್ಷಣ ಇಲಾಖೆಯಿಂದ ನೀಡುವ ಚಿಣ್ಣರ ಅಂಗಳ, ಬಿಸಿಯೂಟ ಮತ್ತು ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಮಂದಬುದ್ಧಿಯ ವಿದ್ಯಾರ್ಥಿಗಳಿಗೆ ನೀಡುವ ವಿಶೇಷ ಶಿಕ್ಷಣ ತರಬೇತಿಯಿಂದ ಮಕ್ಕಳು ವಂಚಿತರಾಗಲಿದ್ದಾರೆ. ಇದರಿಂದ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ಬೀಳುವ ಆತಂಕ ಪಾಲಕರನ್ನು ಕಾಡುತ್ತಿದೆ.

ನಿತ್ಯ 58 ಬಸ್‌ನಲ್ಲಿ ಜನ ಗುಳೆ
ಜಿಲ್ಲೆಯಲ್ಲಿ ಈ ಹಿಂದೆ ಸಾರಿಗೆ ಇಲಾಖೆಯಿಂದ ರಾಯಚೂರು, ಸಿಂಧನೂರು,ಸಿರವಾರ, ಮಾನ್ವಿ, ಅರಕೇರಾ, ಲಿಂಗಸುಗೂರು ಸೇರಿ 43 ಬಸ್‌ಗಳನ್ನು ಕೆಕೆಆರ್‌ಟಿಸಿ ಮೂಲಕ ಬೆಂಗಳೂರಿಗೆ ಸಂಚರಿಸಲು ಬಿಡಲಾಗಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿರುವುದರಿಂದ ಜನ ಗುಳೆ ಹೋಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜನರಿಗೆ ತೊಂದರೆಯಾಗಬಾರದೆಂದು ಹೆಚ್ಚುವರಿಯಾಗಿ 15 ಬಸ್ ಗಳು ಸೇರಿ ಒಟ್ಟು 58 ಬಸ್ ಗಳನ್ನು ಬಿಡಲಾಗಿದೆ. ಸಾರಿಗೆ ಇಲಾಖೆಯ ವರದಿ ಪ್ರಕಾರ ಕೇವಲ ಬಸ್ ನಲ್ಲಿ ಕಳೆದ 15 ದಿನದಲ್ಲಿ 48,720 ಜನರು ಬೆಂಗಳೂರಿಗೆ ತೆರಲಿದ್ದಾರೆಂದು ವರದಿಯಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಈ ಹಿನ್ನಲೆಯಲ್ಲಿ ಜನರು ನಿರಂತರವಾಗಿ ಕೂಲಿ ದೊರೆಯಲು ಕೇಂದ್ರದ ವಿಬಿಜಿ ರಾಮ್ ಜಿ ಯೋಜನೆ ಮೂಲಕ ಜನರಿಗೆ ಕೆಲಸ ನೀಡಲಾಗುತ್ತಿದೆ.
ಪೂವಿತಾ ಎಸ್. ಜಿಲ್ಲಾಧಿಕಾರಿ ರಾಯಚೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net