ಸಿಂಧನೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಉಪಚುನಾವಣೆಯ ಎರಡೂ ಕ್ಷೇತ್ರಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ,ಬಾಗಲಕೋಟೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ತಾವು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ದಿನೇದಿನೆ ಕಾಂಗ್ರೆಸ್ ಪರ ಜನರ ಒಲವು ಹೆಚ್ಚುತ್ತಿದೆ. ಮೇಲಾಗಿ ಎಚ್.ವೈ.ಮೇಟಿ ಅವರ ಅನುಕಂಪದ ಅಲೆಯೂ ಪ್ರಭಾವ ಬೀರುತ್ತಿದೆ. ನುಡಿದಂತೆ ನಡೆದ ಸರ್ಕಾರದ ನಡವಳಿಕೆಗಳು ಈ ಉಪ ಚುನಾವಣೆಗೆ ದೊಡ್ಡ ಶಕ್ತಿಯಾಗಿವೆ ಎಂದರು.
ಬಿಜೆಪಿಯವರು ಸುಳ್ಳು ಹೇಳಿಕೆ ನೀಡುವಲ್ಲಿ ನಿಸ್ಸೀಮರು. ಸತ್ಯವನ್ನು ಮಿಥ್ಯವನ್ನಾಗಿ ಮಾಡುವ ಕಲೆಗಾರಿಕೆ ಅವರಲ್ಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ-3 ಬ್ರಿಜೇಷ್ ಪಟೇಲ್ ಅವರ ವರದಿಯನ್ನು ಇದುವರೆಗೂ ಜಾರಿಮಾಡದೇ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಾ, ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಫೆಡರಲ್ ವ್ಯವಸ್ಥೆಯ ವಿಶ್ವಾಸವನ್ನು ಕುಸಿಯುವಂತೆ ಮಾಡುತ್ತಿದೆ ಎಂದು ದೂರಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಪ್ರಚಾರದ ವೇಳೆ, ಗ್ಯಾರಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಸರ್ಕಾರದ ಹಣ ಅವರಪ್ಪನ ಮನೆಯಿಂದ ತರುತ್ತದೆಯೇ? ಎಂದು ಲೇವಡಿ ಮಾಡಿರುವುದು ಸರಿಯಲ್ಲ. ಅವರು ಸಹ ತಮ್ಮಪ್ಪನ ಮನೆಯಿಂದ ಹಣವನ್ನು ಕೇಂದ್ರ ಸರ್ಕಾರದ ಯೋಜನೆಗಳಿಗೆ ತಂದು ಕೊಡುತ್ತಿದ್ದಾರೆಯೇ? ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಹಣವನ್ನು ರಾಜ್ಯ ಸರ್ಕಾರಕ್ಕೆ ಸರಿಯಾಗಿ ಪಾವತಿ ಮಾಡುತ್ತಿಲ್ಲ. 100ರೂ. ಹಣ ಕಟ್ಟಿಸಿಕೊಂಡು ಕೇವಲ 13ರೂ. ಮಾತ್ರ ನೀಡುತ್ತಿದೆ.
ಇದರಿಂದ ರಾಜ್ಯದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುತ್ತಿವೆ. ರಾಜ್ಯವನ್ನು ಪ ್ರತಿನಿಧಿಸುವ ಕೇಂದ ್ರ ಮಂತ್ರಿಗಳು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಂದಾದರೂ ಲೋಕಸಭೆ, ರಾಜ್ಯಸಭೆೆಯಲ್ಲಿ ಖಂಡಿಸಿದ್ದಾರೆಯೇ ಎಂದು ಪ್ರಶ್ನಿಸಿದರು.