ಮಸ್ಕಿ: ತಾಲೂಕಿನ ಗುಡದೂರು ಹಾಗೂ ಗೌಡನಬಾವಿ ಗ್ರಾಪಂಗಳಿಗೆ ಬುಧವಾರ ತಾಪಂ ಇಒ ಅಮರೇಶ ಯಾದವ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಮೇ ಅಂತ್ಯದೊಳಗೆ ಆಸ್ತಿ ಸಮೀಕ್ಷೆ ಪೂರ್ಣಗೊಳಿಸಬೇಕು. ಸರ್ಕಾರದ ಪರಿಷ್ಕೃತ ಆದೇಶದಂತೆ ಸಾರ್ವಜನಿಕರ ಆಸ್ತಿಗಳಿಗೆ ತೆರಿಗೆ ವಿಧಿಸಬೇಕು. ಖಾತ್ರಿ ಯೋಜನೆ ಕೂಲಿಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಬೇಕು. ಜನರಿಗೆ ಸಮರ್ಪಕವಾಗಿ ಕುಡಿವ ನೀರು ಪೂರೈಸಬೇಕು ಎಂದು ಪಿಡಿಒಗಳಿಗೆ ಇಒ ಸೂಚಿಸಿದರು.
ಗುಡದೂರು ಗ್ರಾಮದಲ್ಲಿ ಸಾರ್ವಜನಿಕ ಶೌಚಗೃಹದ ತೆರವು ಕಾರ್ಯ ವೀಕ್ಷಿಸಿದರು. ನಂತರ ಗೌಡನಬಾವಿ ಗ್ರಾಪಂನಲ್ಲಿ ತೆರಿಗೆ ವಸೂಲಾತಿ, ಆಸ್ತಿ ಸಮೀಕ್ಷೆ ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. ನರೇಗಾದಡಿ ಕೈಗೊಂಡಿರುವ ಚರಂಡಿ ಕಾಮಗಾರಿಯನ್ನು ವೀಕ್ಷಿಸಿದರು.
ಸಹಾಯಕ ನಿರ್ದೇಶಕ (ಪಂ.ರಾ) ಸೋಮನಗೌಡ ಪಾಟೀಲ್, ಪಿಡಿಒಗಳಾದ ಕೃಷ್ಣ ಹುನಗುಂದ, ವಸಂತ ಗೀತಾ ಇದ್ದರು. ಬಳಿಕ ಅಂಕುಶದೊಡ್ಡಿ ಗ್ರಾಮದ ಸನ್ಯಾಸಿನಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಕೂಲಿಕಾರರಿಗೆ ಒದಗಿಸುವ ಕುಡಿವ ನೀರನ್ನು ಪರಿಶೀಲಿಸಿದರು.
ತದನಂತರ ಕೆಲಸದ ಅವಧಿ, ಕೆಲಸದ ಅಳತೆ, ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಹಾಜರಾತಿ ದಾಖಲಿಸುವ ಕುರಿತು ಮೇಟಿಗಳು, ಕೂಲಿಕಾರರಿಂದ ಮಾಹಿತಿ ಪಡೆದರು. ಅಂಕುಶದೊಡ್ಡಿ ಗ್ರಾಪಂ ಪಿಡಿಒ ಭುವನೇಶ್ವರಿ ಇದ್ದರು.