ನರೇಗಾ ನೌಕರರ ಭದ್ರತೆಗೆ ಗ್ರೀನ್ ಸಿಗ್ನಲ್

ಬೆಂಗಳೂರಿನಲ್ಲಿ ಆರ್‌ಡಿಪಿಆರ್ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನರೇಗಾ ನೌಕರರ ಸಭೆ ನಂತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನೌಕರರ ಸಂಘ ಮನವಿ ಸಲ್ಲಿಸಿತು. ರಾಜ್ಯಾಧ್ಯಕ್ಷ ವಿನಯ್ ರಾಮಪ್ಪ, ಉಪಾಧ್ಯಕ್ಷ ಸುರೇಶ ಬಾಳೇಕಾಯಿ, ರಾಜ್ಯ ಕಾರ್ಯದರ್ಶಿ ಸಂತೋಷ್, ಅರುಣ್, ಜಯಪ್ರಕಾಶ್ ಇತರರಿದ್ದರು.
ಬೆಂಗಳೂರಿನಲ್ಲಿ ಆರ್‌ಡಿಪಿಆರ್ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನರೇಗಾ ನೌಕರರ ಸಭೆ ನಂತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನೌಕರರ ಸಂಘ ಮನವಿ ಸಲ್ಲಿಸಿತು. ರಾಜ್ಯಾಧ್ಯಕ್ಷ ವಿನಯ್ ರಾಮಪ್ಪ, ಉಪಾಧ್ಯಕ್ಷ ಸುರೇಶ ಬಾಳೇಕಾಯಿ, ರಾಜ್ಯ ಕಾರ್ಯದರ್ಶಿ ಸಂತೋಷ್, ಅರುಣ್, ಜಯಪ್ರಕಾಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭರವಸೆ ನೀಡಿದ ಆರ್‌ಡಿಪಿಆರ್ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲ
  • ವಿಜಯವಾಣಿ ವರದಿ ಪರಿಣಾಮ
  • ವಿವಿಧ ಬೇಡಿಕೆ ಈಡೇರಿಕೆಗೆ ನೌಕರರ ಸಂಘ ಮನವಿ
ದೇವದುರ್ಗ: ಕೇಂದ್ರ ಸರ್ಕಾರವು ನರೇಗಾ ರದ್ದುಮಾಡಿ ವಿಬಿ ಜಿ ರಾಮ್‌ಜಿ ಯೋಜನೆಯನ್ನು ಏ.1ರಿಂದ ಜಾರಿಗೊಳಿಸಲು ಮುಂದಾಗಿದ್ದರಿಂದ ಸೃಷ್ಟಿಯಾಗಿದ್ದ ರಾಜ್ಯ ಹಾಗೂ ಕೇಂದ್ರದ ನಡುವಿನ ಪ್ರತಿಷ್ಠೆ ಕಾಳಗದಲ್ಲಿ ಉದ್ಯೋಗ ಅಭದ್ರತೆ ಎದುರಿಸುತ್ತಿದ್ದ ನೌಕರರಿಗೆ ರಾಜ್ಯ ಸರ್ಕಾರ ಅಭಯಹಸ್ತ ನೀಡಿದೆ.
ಬೆಂಗಳೂರಿನ ಆರ್‌ಡಿಪಿಆರ್ ಕಚೇರಿಯಲ್ಲಿ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲ ಹಾಗೂ ನರೇಗಾ ಆಯುಕ್ತೆ ಅರುಂಧತಿ ಚಂದ್ರಶೇಖರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕುಂದುಕೊರತೆ ಸಭೆಯಲ್ಲಿ ಉದ್ಯೋಗ ಭದ್ರತೆ ಭರವಸೆ ಸಿಕ್ಕಿದೆ. ನೌಕರರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ, ಸಿಬ್ಬಂದಿ ಆತಂಕಕ್ಕೆ ಒಳಗಾಗಬಾರದು. ನರೇಗಾ ಹಾಗೂ ವಿಬಿ ಜಿ.ರಾಮ್‌ಜಿ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಆರು ತಿಂಗಳ ಅವಕಾಶ ನೀಡಿದೆ. ನೌಕರರನ್ನು ಕೈಬಿಡುವ ಬಗ್ಗೆ ಯಾವುದೇ ಪ್ರಸ್ತಾವನೆಯಿಲ್ಲ. ರಾಜ್ಯ ಸರ್ಕಾರ ನರೇಗಾ ಮುಂದುವರಿಸಿದರೂ ನಿಮ್ಮನ್ನೇ ಪರಿಗಣಿಸುತ್ತದೆ ಎಂದು ಸಮೀರ್ ಶುಕ್ಲ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಕಾರ್ಯಾಚರಣೆ ಅಧಿಕಾರಿ ಬಸನಗೌಡ ದಿದ್ದಿಮನಿ, ಸಂಘದ ರಾಜ್ಯಾಧ್ಯಕ್ಷ ವಿನಯ್ ರಾಮಪ್ಪ, ಉಪಾಧ್ಯಕ್ಷ ಸುರೇಶ ಬಾಳೇಕಾಯಿ, ಕಾರ್ಯದರ್ಶಿ ಸಂತೋಷ್, ಅರುಣ್, ಜಯಪ್ರಕಾಶ್ ಇತರರಿದ್ದರು.
ಸಭೆ ನಂತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯದರ್ಶಿ ಸಮೀರ್ ಶುಕ್ಲ ಅವರಿಗೆ ನೌಕರರ ಸಂಘ ಮನವಿ ಸಲ್ಲಿಸಿತು. ನರೇಗಾ ಅಥವಾ ವಿಬಿ ಜಿ.ರಾಮ್‌ಜಿ ಯೋಜನೆ ಜಾರಿಯಾದರೆ ನೌಕರರನ್ನು ಮುಂದುವರಿಸಿ ನಿರಂತರ ವೇತನ ನೀಡಬೇಕು. ಇತರೆ ಇಲಾಖೆಗಳಲ್ಲಿ ನೇಮಕಾತಿ ವೇಳೆ ನರೇಗಾ ನೌಕರರಿಗೆ ಪ್ರಾತಿನಿಧ್ಯ ನೀಡಬೇಕು. ನೌಕರರಿಗೆ ಆರೋಗ್ಯ ವಿಮೆ ಒದಗಿಸಬೇಕು. ವೇತನ ಮತ್ತು ಪ್ರಯಾಣ ಭತ್ಯೆ ಪರಿಷ್ಕರಣೆ ಮಾಡಬೇಕು ಹಾಗೂ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ವಿಜಯವಾಣಿ ವರದಿ ಪರಿಣಾಮ

ನರೇಗಾ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠೆಯ ಕಾಳಗದಲ್ಲಿ 10-15 ವರ್ಷಗಳಿಂದ ದುಡಿಯುತ್ತಿರುವ ನೌಕರರ ಅತಂತ್ರದ ಬಗ್ಗೆ ವಿಜಯವಾಣಿ ಪತ್ರಿಕೆಯು ಮಾ. 6ರಂದು ಸುದ್ದಿ ಪ್ರಕಟಿಸಿ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿತ್ತು. ವರದಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ನೌಕರರ ಕುಂದುಕೊರತೆ ಆಲಿಸಲು ಸಭೆ ಕರೆದಿತ್ತು. ಸಭೆಯಿಂದ ಗೊಂದಲಕ್ಕೆ ಒಳಗಾಗಿದ್ದ ನೌಕರರಿಗೆ ಈಗ ನಿರಾಳತೆ ಮೂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net