ಗ್ರಾಪಂಗಳಿಗಿಲ್ಲ ಪಿಡಿಒಗಳು

ಅರಕೇರಾ ತಾಲೂಕಿನ ನಾಗಡದಿನ್ನಿ ಗ್ರಾಪಂ ಕಚೇರಿ ಆವರಣದಲ್ಲಿ ಯುವಕರು ಬೆಟ್ಟಿಂಗ್ ಆಡುತ್ತಿರುವುದು.
ಅರಕೇರಾ ತಾಲೂಕಿನ ನಾಗಡದಿನ್ನಿ ಗ್ರಾಪಂ ಕಚೇರಿ ಆವರಣದಲ್ಲಿ ಯುವಕರು ಬೆಟ್ಟಿಂಗ್ ಆಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಯುವಕರಿಂದ ಗ್ರಾಪಂ ಆವರಣದಲ್ಲಿ ಬೆಟ್ಟಿಂಗ್!
  • ಜಿಲ್ಲೆಯಲ್ಲಿ ಗ್ರಾಪಂಗಳು ಖಾಲಿ
  • ಪ್ರಭಾರಿಗಳ ರಾಜ್ಯಭಾರ
ರಾಯಚೂರು ಜಿಲ್ಲೆಯ 8 ತಾಲ್ಲೂಕುಗಳಲ್ಲಿ 179ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಿದ್ದು, ಬಹುತೇಕ ಕಡೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಹುದ್ದೆ ಖಾಲಿ ಇವೆ. ಸ್ಥಾನ ಭರ್ತಿ ಇದ್ದ ಕಡೆ ಅಧಿಕಾರಿಗಳು ಪಂಚಾಯಿತಿಗೆ ತೆರಳದೇ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಬಾಡಿಗೆ ಕೋಣೆ ಪಡೆದು ಆಡಳಿತ ನಡೆಸುವುದು ಒಂದುಕಡೆಯಾದರೆ ಕೆಲವರಂತು ಕಚೇರಿ ಮುಖ ನೋಡದೆ ತಿಂಗಳುಗಳು ಕಳೆದಿವೆ.
ಗ್ರಾಮ ಪಂಚಾಯಿತಿ ಕೇಂದ್ರವು ಗ್ರಾಮದ ಸರ್ಕಾರವಿದ್ದಂತೆ. ಅಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಸರ್ಕಾರದ ಭಾಗವಾಗಿ ವಿವಿಧ ಕಾರ್ಯಗಳನ್ನು ಮಾಡಬೇಕು. ಆದರೆ, ಅವರು ಕಚೇರಿಗಳಿಗೆ ಬಾರದ ಕಾರಣ ಕೆಲ ಕಡೆ ಸಿಪಾಯಿ ಮಾತ್ರ ಬಾಗಿಲು ತೆಗೆದು ಇಟ್ಟಿರುತ್ತಾರೆ. ಇದರಿಂದ ಬಹುತೇಕ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಅಲ್ಲದೆ ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲೂ ಸಮರ್ಪಕ ವ್ಯವಸ್ಥೆ ಇಲ್ಲದಂತಾಗಿದೆ. ಇನ್ನೂ ಕೆಲ ಪಿಡಿಒಗಳಿಗೆ 2-3 ಪಂಚಾಯಿತಿಗಳ ಹೆಚ್ಚುವರಿ ಜವಾಬ್ದಾರಿ ನೀಡಿದ್ದು, ಅವರಿಗೂ ಒತ್ತಡವಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಆದಷ್ಟು ಬೇಗ ಪಿಡಿಒಗಳ ನೇಮಕಕ್ಕೆ ಆದ್ಯತೆ ನೀಡಬೇಕಿದೆ ಎಂಬ ಆಗ್ರಹ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಎಷ್ಟು ಖಾಲಿ
ಜಿಲ್ಲೆಯಲ್ಲಿ 8 ತಾಲೂಕುಗಳ ಪೈಕಿ ಒಟ್ಟು 179 ಗ್ರಾಪಂಗಳಿದ್ದು, ಈ ಪೈಕಿ 128 ಗ್ರಾಪಂಗಳಿಗೆ ಮಾತ್ರ ಪಿಡಿಒಗಳಿದ್ದು, ಉಳಿದ 51 ಗ್ರಾಪಂಗಳು ಪ್ರಭಾರಿಗಳಿಂದ ಕಾರ್ಯನಿರ್ವಹಣೆ ಮಾಡಲಾಗಿದೆ. ಇದರಲ್ಲಿ ರಾಯಚೂರು ತಾಲೂಕಿನಲ್ಲಿ 34 ಗ್ರಾಪಂಗಳಲ್ಲಿ 31 ಜನ ಪಿಡಿಒಗಳಿದ್ದು, 3 ಖಾಲಿ ಇವೆ. ಮಾನ್ವಿ ತಾಲೂಕಿನಲ್ಲಿ 17 ಗ್ರಾಪಂಗಳ ಪೈಕಿ 12 ಪಿಡಿಒಗಳಿದ್ದು, 5 ಖಾಲಿ ಇವೆ. ಸಿರವಾರ ತಾಲೂಕಿನಲ್ಲಿ 14 ಗ್ರಾಪಂಗಳ ಪೈಕಿ 9 ಪಿಡಿಒಗಳ ಪೈಕಿ 5 ಖಾಲಿ ಇವೆ. ಲಿಂಗಸುಗೂರು ತಾಲೂಕಿನಲ್ಲಿ 30 ಗ್ರಾಪಂಗಳ ಪೈಕಿ 22 ಪಿಡಿಒಗಳಿದ್ದು, 8 ಖಾಲಿ ಇವೆ. ಮಸ್ಕಿ ತಾಲೂಕಿನಲ್ಲಿ 21 ಗ್ರಾಪಂಗಳಿದ್ದು, 16 ಪಿಡಿಒಗಳ ಪೈಕಿ 5 ಖಾಲಿ ಇವೆ. ಅರಕೇರಾ ತಾಲೂಕಿನಲ್ಲಿ 17 ಗ್ರಾಪಂಗಳ ಪೈಕಿ 5 ಪಿಡಿಒಗಳಿದ್ದು, 12 ಖಾಲಿ ಇವೆ. ದೇವದುರ್ಗ ತಾಲೂಕಿನಲ್ಲಿ 16 ಗ್ರಾಪಂಗಳಿದ್ದು, 6 ಪಿಡಿಒಗಳಿದ್ದು, 10 ಖಾಲಿ ಇವೆ. ಸಿಂಧನೂರು ತಾಲುಕಿನಲ್ಲಿ 30 ಗ್ರಾಪಂಗಳಿದ್ದು, 27 ಪಿಡಿಒಗಳ ಪೈಕಿ 3 ಖಾಲಿ ಇವೆ.

ಪ್ರಭಾರಿಗಳ ರಾಜ್ಯಭಾರ
ಜಿಲ್ಲೆಯಲ್ಲಿ ಒಟ್ಟು 51 ಗ್ರಾಪಂಗಳನ್ನು ಪಿಡಿಒಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಕೆಲಸದ ಒತ್ತಡದಿಂದ ಎಲ್ಲಿಯೂ ಸೇಧಿವೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳ ಗೈರು ಅಥವಾ ಕೆಲಸದ ಒತ್ತಡದಿಂದಾಗಿ ಜನಸಾಮಾನ್ಯರು ಕೂಡ ಸೇವೆ ಪಡೆಯಲು ವಿಳಂಬವಾಗುವಂತಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಸಮಪರ್ಕ ನೀರು ಪೂರೈಕೆ ಇನ್ನಿತರ ಕೆಲಸಗಳೂ ಈಡೇರದೆ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿಗೆ ಜನ ಆಗಮಿಸಿ ಸಮಸ್ಯೆ ಹಂಚಿಕೊಂಡಿದ್ದಾರೆ.

ಅಧಿಕಾರ ಅವಧಿ ಮುಕ್ತಾಯ
ಗ್ರಾ.ಪಂಗಳಲ್ಲಿ ಜನಪ್ರತಿನಿಧಿಗಳ ಅಧಿಕಾರ ಅವಧಿಯು ಮುಕ್ತಾಯವಾಗಿದ್ದು, ಈಗಾಗಲೇ ಪಿಡಿಒ ಕೊರತೆ ಎದುರಿಸುತ್ತಿರುವ ಗ್ರಾ.ಪಂಗಳು, ಚುನಾವಣೆ ನಡೆದು ಹೊಸ ಜನಪ್ರತಿನಿಧಿಗಳು ಬರುವವರೆಗೂ ಮತ್ತಷ್ಟು ಸವಾಲು ಎದುರಿಸುತ್ತಿದ್ದಾರೆ. ಪಿಡಿಒಗಳು, ಜನಪ್ರತಿನಿಧಿಗಳು ಇಲ್ಲದೇ ಕೆಲಸಗಳು ನಡೆಯುವುದು ಅನುಮಾನ ಎಂಬಂತಾಗಿದೆ.

ಪಂಚಾಯಿತಿಯಲ್ಲಿ ಬೆಟ್ಟಿಂಗ್ !
ಜಿಲ್ಲೆಯ ಅರಕೇರಾ ತಾಲೂಕಿನ ನಾಗಡದಿನ್ನಿ ಗ್ರಾಪಂ ಪಿಡಿಒ ಮಲ್ಲೇಶ ನಾಯಕ ಅವರಿಗೆ 4 ಪಂಚಾಯಿತಿಗಳ ಪ್ರಭಾರಿ ನೀಡಿದ ನೇಪದಿಂದ ನಾಗಡದಿನ್ನಿ ಪಂಚಾಯಿತಿಗೆ ಆಗಮಿಸುವುದಿಲ್ಲ. ಇದರಿಂದ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯದೆ ಇರುವುದರಿಂದ ಗ್ರಾಪಂ ಕಚೇರಿಯ ಆವರಣದಲ್ಲಿ ಗ್ರಾಮದ ಕೆಲ ಯುವಕರು ಗೋಲಿ ಆಟದ ಬೆಟ್ಟಿಂಗ್ ಆಡುತ್ತಿದ್ದಾರೆ. ಕೆಲವರು ಮೇಕೆ ಹಾಗೂ ಜಾನುವಾರಗಳನ್ನು ಕಟ್ಟುತ್ತಾರೆ. ಅವಗೊಮ್ಮೆ, ಇವಗೊಮ್ಮೆ ಆಗಮಿಸುವ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ಇರುತ್ತಿದ್ದಾರೆ. ಜತೆಗೆ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ವಾಟರ್ ಬಿಲ್ ಆಗಲಿ, ಕರ ವಸೂಲಿಯಾಗುತ್ತಿಲ್ಲ. ಕುಡಿಯವ ನೀಡಿನ ಮೋಟರ್ ರಿಪೇರಿಯಾದರೆ ತಿಂಗಳುಗಟ್ಟಲೆ ಜನ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿನ 179 ಗ್ರಾಪಂಗಳು ಇವೆ. ಇದರ ಪೈಕಿ 128 ರಲ್ಲಿ ಮಾತ್ರ ಖಾಯಂ ಪಿಡಿಒಗಳಿದ್ದು, 51 ಗ್ರಾಪಂಗಳಿಗೆ ಪ್ರಭಾರಿ ಪಿಡಿಒಗಳನ್ನು ನೇಮಕ ಮಾಡಲಾಗಿದೆ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಮೇಲೆ ಕ್ರಮವಾಗಲಿದೆ.
ಕುಡಿಯುವ ನೀರು ಸೇರಿದಂತೆ ಅಭಿವೃದ್ದಿ ಕಡೆ ಗಮನ ಹರಿಸಲು ಸೂಚಿಸಲಾಗಿದೆ.
ಈಶ್ವರ ಕುಮಾರ ಕಾಂದೊ ಜಿಪಂ ಸಿಇಓ ರಾಯಚೂರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net