ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಂಚು ರೂಪಿಸಿರುವ ಸರ್ಕಾರದ ಕ್ರಮವನ್ನು ಗೌಡೂರು ಗ್ರಾಮಸ್ಥರು ಖಂಡಿಸಿದರು. ತಾಪಂ ಮಾಜಿ ಸದಸ್ಯ ರಾಜಾ ಸೇತುರಾಮ್ ನಾಯಕ, ರಾಚಯ್ಯಸ್ವಾಮಿ ಗಣಾಚಾರಿ, ಯಮನೂರಪ್ಪ ಗಾಳಿ, ಸಂಗನಗೌಡ ಇತರರಿದ್ದರು.
ಹಟ್ಟಿಚಿನ್ನದಗಣಿ:ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣಕುಮಾರ್ ಆರೋಪಿಸಿದರು.
ಗೌಡೂರು ಗ್ರಾಮದ ದುರ್ಗಾದೇವಿ ದೇವಸ್ಥಾನ ಮುಂಭಾಗದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಾರ್ವಜನಿಕ ಶಿಕ್ಷಣ ಉಳಿಸಿ ಜಾಗೃತಿ ಸಭೆಯಲ್ಲಿ ಮಾತನಾಡಿದರು. ರಾಜ್ಯಾದ್ಯಂತ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಂಚು ರೂಪಿಸಿರುವ ಸರ್ಕಾರದ ಕ್ರಮ ಖಂಡನೀಯ. ಇದು ಶಿಕ್ಷಣ ಉಳಿಸುವ ನೀತಿ ಅಲ್ಲ, ಖಾಸಗೀಕರಣಕ್ಕೆ ಒಯ್ಯುವ ಕುತಂತ್ರ. ಬಡ ಮಕ್ಕಳ ಶಿಕ್ಷಣ ಹಾಳು ಮಾಡುವ ಸಂಚು ಎಂದು ದೂರಿದರು.
ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿ, ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಗ್ರಾಮೀಣ ಭಾಗದ ಮಕ್ಕಳನ್ನು ಶಿಕ್ಷಣದಿಂದ ದೂರ ಮಾಡಲಾಗುತ್ತಿದೆ ಎಂದರು. ಗ್ರಾಮದ ಪ್ರಮುಖ ರಶೀದ್ ಪಾಷಾ ಜಮಾದಾರ್ ಮಾತನಾಡಿ, 28 ವರ್ಷಗಳ ಹೋರಾಟದ ಫಲವಾಗಿ ಬಂದಿರುವ ನಮ್ಮೂರಿನ ಶಾಲೆಯನ್ನು 13 ಕಿಮೀ ದೂರದ ಕೋಠಾ ಗ್ರಾಮದ ಶಾಲೆಯೊಂದಿಗೆ ವಿಲೀನಗೊಳಿಸುವ ಯತ್ನವನ್ನು ಸಹಿಸುವುದಿಲ್ಲ ಎಂದರು.
ತಾಪಂ ಮಾಜಿ ಸದಸ್ಯ ರಾಜಾ ಸೇತುರಾಮ್ ನಾಯಕ, ರಾಚಯ್ಯಸ್ವಾಮಿ ಗಣಾಚಾರಿ, ಯಮನೂರಪ್ಪ ಗಾಳಿ, ಸಂಗನಗೌಡ, ಅಮರೇಶ ಬಡಿಗೇರ, ಅಮರೇಶ ಬೆಣ್ಣೆ, ಯಲ್ಲಪ್ಪ ಮಾನ್ವಿ, ಮೌಲಸಾಬ್ ದಳಪತಿ, ಅಮರಗುಂಡ ಸಂಗಟಿ, ಮಾಳಿಂಗರಾಯ, ಎಐಡಿವೈಒ ಸಂಘಟನೆಯ ಬಾಲಾಜಿ, ತಿರುಪತಿ, ಚಂದ್ರಶೇಖರ ಇತರರಿದ್ದರು.