ದೇವದುರ್ಗ : ಬಗರ್‌ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು, ತಿರಸ್ಕೃತಗೊಂಡ ನಮೂನೆ 57 ಅರ್ಜಿಗಳನ್ನು ಮರುಪರಿಶೀಲನೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತಸೌಧದ ಮುಂದೆ ದಸಂಸ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಸರ್ಕಾರಿ ಜಮೀನು, ಗೋಮಾಳ, ಅರಣ್ಯ ಭೂಮಿಯಲ್ಲಿ ರೈತರು ಉಳಿಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಪಟ್ಟಾ ನೀಡುವಂತೆ ವರ್ಷಗಳಿಂದ ಹೋರಾಟ ನಡೆಸಿದರೂ ಸ್ಪಂದಿಸುತ್ತಿಲ್ಲ. ಹಲವು ಕಡೆ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದ್ದು, ಇದರಿಂದ ಜೀವನ ಕಷ್ಟವಾಗಿದೆ. ಅಕ್ರಮ-ಸಕ್ರಮ ಯೋಜನೆಯಡಿ ನಮೂನೆ 57ರ ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಫಾರ್ಮ್ ನಂ.57ರಲ್ಲಿ ಸಲ್ಲಿಸಿದ ತಿರಸ್ಕೃತ ಅರ್ಜಿಗಳನ್ನು ಮರುಪರಿಶೀಲನೆ ಮಾಡಬೇಕು. ಅರಣ್ಯ ಭೂಮಿ ಸಾಗುವಳಿಯಿಂದ ತೆರವು ಕಾರ್ಯಾಚರಣೆ ಕೈಬಿಡಬೇಕು. ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಅರಣ್ಯ ಪ್ರದೇಶ ಸೇರಿದಂತೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸಕ್ರಮದಡಿ ಹಕ್ಕುಪತ್ರ ನೀಡಬೇಕು. ಅರಕೇರಾದಲ್ಲಿ ಲಭ್ಯವಿರುವ 20 ಎಕರೆ ಸರ್ಕಾರಿ ಜಮೀನನ್ನು ನಿವೇಶನಕ್ಕೆ ಮಂಜೂರು ಮಾಡಬೇಕು. ಕ್ಯಾದಿಗೇರಾ, ಶಾವಂತಗೇರಾ, ಲಿಂಗದಹಳ್ಳಿಯಲ್ಲಿ ಲಭ್ಯವಿರುವ ಭೂಮಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ನೌಕರರ ವೇತನ ಹೆಚ್ಚಿಸಿ ಕಾಲಕಾಲಕ್ಕೆ ಪಾವತಿಸಬೇಕು. ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಯೋಜನೆ ವಿಸ್ತರಿಸಿ ಅವರಿಗೂ ಭೂಮಿ ನೀಡಬೇಕು. ತಾಲೂಕಿನ ವಿವಿಧೆಡೆ ಇರುವ ಸ್ಮಶಾನ ಭೂಮಿ ಸಮಸ್ಯೆ ಪರಿಹರಿಸಬೇಕು. ಮಸೀದಪುರ ಗ್ರಾಮವನ್ನು ಸ್ಥಳಾಂತರಿಸಬೇಕು. ಸರ್ಕಾರಿ ಭೂಮಿ ಪ್ರಭಾವಿಗಳಿಂದ ಒತ್ತುವರಿಯಾಗಿದ್ದು ತೆರವುಗೊಳಿಸಬೇಕು. ಎಲ್ಲ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.