ದೇವದುರ್ಗ: ಮಕ್ಕಳಲ್ಲಿ ಕಂಡುಬರುವ ಜಂತುಹುಳು ನಿರ್ಮೂಲನೆಗೆ ಪಾಲಕರು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು. ಪ್ರತಿಯೊಂದು ಮಗುವಿಗೂ ಅಲ್ಬೆಂಡಜೋಲ್ ಮಾತ್ರೆ ತಪ್ಪದೆ ನೀಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಾಟೀಲ್ ಓಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. 1ರಿಂದ 19 ವರ್ಷ ವಯಸ್ಸಿನವರಲ್ಲಿ ಜಂತುಹುಳು ಬಾಧೆ ಕಾಣಿಸಿಕೊಳ್ಳುತ್ತದೆ. ಇದರಿಂದ ರಕ್ತಹೀನತೆ, ಅಪೌಷ್ಟಿಕತೆ, ಕಲಿಕೆಯಲ್ಲಿ ಹಿಂದುಳಿಯುವುದು, ತೂಕದಲ್ಲಿ ಇಳಿಕೆ ಮತ್ತು ನಿಶ್ಯಕ್ತಿ ಕಾಣಿಸಿಕೊಳ್ಳುತದೆ. ಹಾಗಾಗಿ ವರ್ಷದಲ್ಲಿ 2 ಬಾರಿ ಜಂತುಹುಳು ನಿವಾರಣೆ ಮಾತ್ರೆ ತೆಗೆದುಕೊಳ್ಳಬೇಕು. 1ರಿಂದ 2 ವರ್ಷದ ಮಕ್ಕಳಿಗೆ 200ಎಂಜಿ, 2ರಿಂದ 3 ವರ್ಷದವರಿಗೆ 400ಎಂಜಿ ಮಾತ್ರೆ ಪುಡಿಮಾಡಿ ಕುಡಿಸಬೇಕು. 3ರಿಂದ 19 ವರ್ಷದವರು 400ಎಂಜಿ ಅಲ್ಬೆಂಡಜೋಲ್ ಮಾತ್ರೆ ಚೀಪಬೇಕು ಎಂದರು.
ಡಾ.ಪ್ರವೀಣ್ ಕುಮಾರ್, ಡಾ.ತ್ಯಾಗರಾಜ್, ಡಾ.ಸುಫಿಯಾ, ಡಾ.ನಾಗೇಶ್, ಮುಖ್ಯಶಿಕ್ಷಕ ಶಾಂತಗೌಡ , ಶಿಕ್ಷಕರಾದ ಪವಿತ್ರಾ, ನಾಗರತ್ನ, ವಿಶ್ವನಾಥ, ಸವಿತಾ, ರಮೇಶ, ಯಾಸ್ಮಿನ್, ಆರೋಗ್ಯ ಇಲಾಖೆ ಸಿಬ್ಬಂದಿ ಪ್ರೇಮಾ, ಶಾರದಾ, ಗೀತಮ್ಮ, ಸೋಮಪ್ಪ, ಓಂಕಾರ್, ಸಂಗಮ್ಮ, ಮಾನಮ್ಮ, ಬಲವಂತರಾಯ, ಆಶಾ ಕಾರ್ಯಕರ್ತೆಯರಾದ ನಾಗಮ್ಮ, ಮಹ್ಮದಿ ಇತರರಿದ್ದರು.